ಅವ್ಯವಸ್ಥೆ ಆಗರವಾದ ಪಪಂ ವಾಣಿಜ್ಯ ಮಳಿಗೆ
ಕ.ಪ್ರ.ವಾರ್ತೆ, ಸೊರಬ, ಜು.29
ಪಪಂ ವಾಣಿಜ್ಯ ಮಳಿಗೆ ಅವ್ಯವಸ್ಥೆ ಕುರಿತು ವೀಕ್ಷಿಸಿದ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಲಕ್ಷಾಂತರ ರೂ. ವ್ಯಯಿಸಿ ಪಟ್ಟಣದ ಹಳೆ ಬಸ್ಸು ನಿಲ್ದಾಣದ ಬಳಿ ವಾಣಿಜ್ಯ ಮಳಿಗೆ ಕಟ್ಟಲಾಗಿದ್ದು, ಕೆಳ ಅಂತಸ್ತಿನ ಕೆಲವು ಕೊಠಡಿಗಳು ಮೂತ್ರವಿಸರ್ಜನೆ, ಕೊಳೆತು ನಾರುವ ತ್ಯಾಜ್ಯಗಳಿಂದ ಕೂಡಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ಸದಸ್ಯರು ಖುದ್ದು ಪರಿಶೀಲಿಸಿದರು.
6ಮಳಿಗೆ ಉಪಯೋಗ: ಪ್ರಸ್ತುತ ಕೆಳ ಅಂತಸ್ತಿನ 6 ಮಳಿಗೆಗಳು ಮಾತ್ರ ಉಪಯೋಗವಾಗುತ್ತಿದ್ದು, ಬಾಡಿಗೆ ದುಬಾರಿ ಎಂಬ ಕಾರಣಕ್ಕೆ ಉಳಿದವು ಖಾಲಿ ಉಳಿದಿವೆ. ಹೀಗೆ ಖಾಲಿ ಉಳಿದಿರುವುದರಿಂದ, ಕೊಠಡಿಗೆ ಯಾವುದೇ ರಕ್ಷಣಾ ವ್ಯವಸ್ಥೆಯನ್ನೂ ಮಾಡಲಿಲ್ಲ.
ಇಲ್ಲಿ ಪಕ್ಕದಲ್ಲಿಯೇ ಸಾರ್ವಜನಿಕ ಸುಲಭ ಶೌಚಾಲಯವಿದ್ದರೂ, ಅಲ್ಲಿಗೆ ಹೋಗದೆ ಮಲ, ಮೂತ್ರ ವಿಸರ್ಜಿಸುತ್ತಾರೆ. ಬೀಡಾಡಿ ದನ, ಕತ್ತೆ, ಹಂದಿಗಳಿಗೆ ಆವಾಸವಾಗಿದೆ. ಈಗಾಗಲೇ ಈ ರೀತಿ ಕೊಳೆತು ನಾರುವ ವಾಸನೆ, ಕೊಳಚೆಯಿಂದ ಸಾಂಕ್ರಾಮಿಕ ರೋಗ ಹರಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಕೆಲ ವರ್ತಕರು, ಸಾರ್ವಜನಿಕರು ನೀಡಿದ ದೂರಿನ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದ ಜಿಪಂ ಅಧ್ಯಕ್ಷ, ಸದಸ್ಯರು ಆಡಳಿತಾಧಿಕಾರಿ ತಹಸೀಲ್ದಾರ್ ಹಾಗೂ ಪಪಂ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೂಡಲೇ ಮಳಿಗೆಗಳಿಗೆ ಕಾವಲುಗಾರರನ್ನು ನೇಮಿಸಬೇಕು. ದಿನವೂ ಸ್ವಚ್ಛತೆ ಕಾಪಾಡುವ ಬಗ್ಗೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು. ಜಿಪಂ ಸದಸ್ಯೆ ಕೋಮಲಾ ನಿರಂಜನ್, ಮಲ್ಲಮ್ಮ ಮಲ್ಲಿಕಾರ್ಜುನ್, ಸದಸ್ಯ ಗುರುಕುಮಾರ್ ಪಾಟೀಲ್, ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್ ಮೊದಲಾದವರು ಇದ್ದರು.