ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ

Rashmi Kasaragodu
Updated On : 30 Jul 2013, 11:10 am

ಶಿವಮೊಗ್ಗ: ತಾಲೂಕಿನ ವ್ಯಾಪ್ತಿಯ ಸರ್ಕಾರಿ ಶಾಲಾ ಕಟ್ಟಡಗಳು ಮಳೆಯಿಂದ ಶಿಥಿಲಗೊಂಡಿದ್ದು, ಕೂಡಲೇ ಅಂತಹ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ತಾಪಂ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ ಪ್ರಸಂಗ ಸೋಮವಾರ ನಡೆದ ತಾಪಂ ಸಭೆಯಲ್ಲಿ ನಡೆಯಿತು.
ಸೋಮವಾರ ನಡೆದ ಶಿವಮೊಗ್ಗ ತಾಪಂ ಸಾಮಾನ್ಯ ಸಭೆಯಲ್ಲಿ ಶಾಲಾ ಕೊಠಡಿಗಳ ದುರವಸ್ತೆಯನ್ನು ಪ್ರಸ್ತಾಪಿಸಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾಗಿದೆ. ಹಾಗಾಗಿ ಶಾಲಾ ಕಟ್ಟಡಗಳು ಸೋರುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
37 ಕೊಠಡಿ: ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಪಾಟೀಲ್, ಇಲಾಖೆ ಅಧಿಕಾರಿಗಳು ಅಂತಹ ಶಾಲೆಗಳಿಗೆ ಭೇಟಿ ನೀಡಿ ಈಗಾಗಲೇ ಗುರುತಿಸಿದ್ದಾರೆ, ಸುಮಾರು 37 ಕೊಠಡಿಗಳು ದುರಸ್ತಿಯಾಗಬೇಕಿದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಂದನಂತರ ದುರಸ್ತಿ ಕಾರ್ಯಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಗೆ ಗೈರು: ತಾಪಂ ಸದಸ್ಯ ಪರಮೇಶ್ವರ್, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗೆ ಸರಿಯಾಗಿ ಬರುತ್ತಿಲ್ಲ. ಯಾವ ಕಾರಣದಿಂದ ಸಭೆಗೆ ಗೈರು ಹಾಜರಾಗುತ್ತಿದ್ದಾರೆ, ಈ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆಯಬೇಕು. ಮುಂದಿನ ಸಭೆಗೆ ಅಧಿಕಾರಿಗಳನ್ನು ಕರೆಸುವ ಪ್ರಯತ್ನವಾಗಬೇಕು. ಸಭೆಗೆ ಗೈರು ಹಾಜರಾದ ಅಧಿಕಾರಿ ವಿರುದ್ಧ ನೋಟಿಸ್ ಜಾರಿ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಮಕೈಗೊಳ್ಳಬೇಕು: ಉಪಾಧ್ಯಕ್ಷೆ ಅತೀಯ ಬೇಗಂ, ಊರುಗಡೂರಿನಲ್ಲಿ ಉರ್ದು ಶಾಲೆಯಿದೆ. ಆದರೆ, ಶಾಲೆಯಲ್ಲಿ ಭಾಷೆ ಬರದ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಇದರಿಂದ ಪಾಠ, ಪ್ರವಚನಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಇದಕ್ಕೆ ಕ್ರಮಕೈಗೊಳ್ಳಬೇಕು. ಭಾಷೆ ಬರುವಂತಹ ಶಿಕ್ಷಕರನ್ನು ನೇಮಕ ಮಾಡಬೇಕು ಎಂದರು. ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ, ಕೆಲವು ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದೆ. ಇವುಗಳಿಗೆ ತಿಂಗಳ ಬಾಡಿಗೆಯನ್ನು ಗ್ರಾಪಂ ಮೂಲಕ ಪಾವತಿ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಿ ಹಾಗೂಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಂದ ಪೂರೈಸಲಾಗುತ್ತಿರುವ ಹಾಲಿನ ಪುಡಿಯ ಗುಣಮಟ್ಟ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಭೆಗೆ ಸದಸ್ಯರೇ ವಿಳಂಬ


ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗದ ಸದಸ್ಯರು.. ಸದಸ್ಯರ ಆಗಮನಕ್ಕಾಗಿ ಕಾದು ಕುಳಿತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರಿಗೆ ಸಭೆಗೆ ಬರವಂತೆ ಫೋನ್ ಮಾಡಿ ಎಂದು ಒತ್ತಾಯ ಮಾಡುವ ಅಧಿಕಾರಿಗಳು.. ಇದು ಸೋಮವಾರ ನಡೆದ ತಾಪಂ ಸಭೆಯ ಘಟನಾವಳಿಗಳು.
ಅಧಿಕಾರಿಗಳ ಒತ್ತಾಯದ ಮೇರೆಗೆ ಸಭೆಗೆ ಬಂದ ಸದಸ್ಯರು, ಅಧ್ಯಕ್ಷರು ಮತ್ತು ಅಧಿಕಾರಿಗಳ ಮೇಲೆಯೇ ವಾಕ್ಸಮರ ನಡೆಸಿದರು. ಈ ನಡುವೆ ಸದಸ್ಯರೊಬ್ಬರು ಕೆಲ ಅಧಿಕಾರಿಗಳು ಮತ್ತು ಸದಸ್ಯರು ಹಣಕ್ಕಾಗಿ ಸಭೆಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದಾಗ ಇತರೆ ಸದಸ್ಯರಿಂದ ವಾಕ್ಸಮರ, ವಾಗ್ದಾಳಿ ನಡೆಯಿತು.
ಈ ವೇಳೆ ಸದಸ್ಯ ಪರಮೇಶ್, ಗಲಾಟೆ ಮಾಡಲು ಸಭೆಗೆ ಬಂದಿಲ್ಲ, ಅಭಿವೃದ್ಧಿಗೆ ಬಗ್ಗೆ ಚರ್ಚಿಸಲು ಬಂದಿದ್ದೇವೆ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement