ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ
ಶಿವಮೊಗ್ಗ: ಸರ್ಕಾರಿ ಪ್ರಾಥಮಿಕ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಹಾಕಿರುವ ಘಟನೆ ಚೋರಡಿ ಸಮೀಪದ ತುಪ್ಪೂರು ಗ್ರಾಮದಲ್ಲಿ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಇದೇ ಹೊತ್ತಿನಲ್ಲಿ ಆಕ್ರೋಶ ಭರಿತ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದು, ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ.
ಶಾಲೆ ಅಭಿವೃದ್ಧಿ ಮಂಡಳಿ ಸದಸ್ಯರು ಮತ್ತು ಶಿಕ್ಷಕರ ನಡುವಿನ ವೈಮನಸ್ಸಿನಿಂದ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದು, ಟ್ಯಾಂಕ್‌ನ ವಿಷಪೂರಿತ ನೀರನ್ನು ನೀರು ಪರೀಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇನ್ನೊಂದೆಡೆ ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರು ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ: ಶನಿವಾರ ಬೆಳಿಗ್ಗೆ ನೀರುಗಂಟಿ ಕೆಲಸ ಮಾಡುವ ಸಂತೋಷ್ ಎಂಬುವವರು ಶಾಲೆಗೆ ಹೊಂದಿಕೊಂಡಂತೆ ಇರುವ ಟ್ಯಾಂಕ್‌ನಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ತುಂಬಿದೆ ಎಂದು ಪರಿಶೀಲಿಸಲು ಹೋದಾಗ ವಿಷಪೂರಿತ ಪುಡಿ ಸ್ಥಳದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಹಾಗೆಯೇ ನೀರು ಬಳಸದಂತೆ ಸೂಚಿಸಿದ್ದಾರೆ.
ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ಶಾಲೆ ಮುಂದೆ ಜಮಾಯಿಸಿದ್ದಾರೆ. ಜೊತೆಗೆ ಘಟನೆಗೆ ಕಾರಣವೇನು ಎಂದು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರನ್ನು ಪ್ರಶ್ನಿಸಲಾರಂಭಿಸಿದರು.
ಸಾಮಾನ್ಯವಾಗಿ ಈ ಟ್ಯಾಂಕ್‌ನ ಬೀಗದ ಕೀ ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರ ಬಳಿಯೇ ಇರುತ್ತದೆ. ಹೀಗಿರುವಾಗ ಬೀಗ ತೆಗೆದೇ ಈ ಕೃತ್ಯ ಮಾಡಲಾಗಿದೆ, ನಿಮ್ಮಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದೆ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿತ್ತು.
ಪೋಷಕರ ಆತಂಕ: ಘಟನೆಯಿಂದ ವಿದ್ಯಾರ್ಥಿಗಳ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿದಿದ್ದಾರೆ. ಅಲ್ಲದೇ ಸೋಮವಾರ ಶಾಲೆಗೆ ಆಗಮಿಸಿದ ಅರ್ಧದಷ್ಟು ಮಕ್ಕಳು ಮನೆಯಿಂದಲೇ ಊಟ ಮತ್ತು ನೀರನ್ನು ಜೊತೆಗೆ ತಂದಿದ್ದರು. ಈ ನಡುವೆ ಗ್ರಾಮಸ್ಥರು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದು, ಪರೀಕ್ಷಣಾ ಕೇಂದ್ರದಿಂದ ಫಲಿತಾಂಶ ಬುಧವಾರ ಬರುವುದರಿಂದ ಅಲ್ಲಿಯವರೆಗೆ ಶಾಲೆಗೆ ತೆರೆಯುವು ಬೇಡ ಎಂದು ಬೀಗ ಜಡಿದಿದ್ದಾರೆ. ಇದಕ್ಕೆ ಪೋಷಕರೂ ಸಹ ಬೆಂಬಲ ನೀಡಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ಅಧಿಕಾರಿಯ ನಿರ್ಲಕ್ಷ್ಯ: ಇಷ್ಟೆಲ್ಲಾ ಘಟನೆಗಳು ನಡೆದರೂ ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್ ಸ್ಥ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿಲ್ಲ. ಪರಿಸ್ಥಿತಿಯನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಇದು ಅಧಿಕಾರಿಯ ಉದಾಸೀನ ಭಾವನೆ ಎತ್ತಿತೋರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರ ನಿರ್ಣಯ: ವಿಷ ಪೂರಿತ ನೀರಿನ ಪರೀಕ್ಷಾ ಫಲಿತಾಂಶ ಬರುವವರಗೆ ಯಾವುದೇ ಕಾರಣಕ್ಕೂ ನೀರು ಬಳಕೆ ಮಾಡಬಾರದು, ಶಾಲೆಯ ಬಾಗಿಲು ತೆರೆಯಬಾರದು ಎಂದು ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ. ಇದರೊಟ್ಟಿಗೆ ಈ ಶಾಲೆಯ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲವಾದ ಕಾರಣ ಅವರನ್ನು ಬೇರೆಡೆ ವರ್ಗಾಯಿಸಬೇಕು. ಶಾಲೆಯೊಳಗಿನ ಆಂತರಿಕ ಜಗಳದಲ್ಲಿ ವಿದ್ಯಾರ್ಥಿಗಳನ್ನು ಬಲಿ ಕೊಡಲು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರನ್ನು ಮುಂದಾಗಿದ್ದಾರೆ. ಹೀಗಾಗಿ ಹಾಲಿ ಎಸ್‌ಡಿಎಂಸಿಯನ್ನು ಬಹಿಷ್ಕರಿಸಿ ಬೇರೆ ಪದಾಧಿಕಾರಿಗಳನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಇದೇ ಮೊದಲೇನಲ್ಲ: ಗ್ರಾಮಸ್ಥರು ಹೇಳುವಂತೆ, ಈ ಶಾಲೆಯಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ. ಕಳೆದ ಬಾರಿ ಊಟಕ್ಕೆ ಬಳಸುವ ಉಪ್ಪಿನಲ್ಲಿ ಟಿಂಚರ್ ಬೆರೆಸಲಾಗಿತ್ತು. ಈ ಮಾಹಿತಿ ಗ್ರಾಮಸ್ಥರಿಗೆ ತಿಳಿಯುವ ಮುನ್ನವೇ ಪ್ರಕರಣ ಮುಚ್ಚಿಹಾಕಲಾಗಿತ್ತು. ಅಷ್ಟೇ ಅಲ್ಲದೇ, ಅಂಗವಿಕರ ಯೋಜನೆಯಡಿಯಲ್ಲಿ ಶಾಲಾ ಆವರಣದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೆಲ ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ ಶೌಚಾಲಯಕ್ಕಾಗಿ ತೆಗೆದ ಗುಂಡಿಯಲ್ಲಿ ಬಿದ್ದಿದ್ದು, ತಕ್ಷಣ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ. ಇಷ್ಟಾದರೂ ಎಸ್‌ಡಿಎಂಸಿ ಎಚ್ಚೆತ್ತುಕೊಂಡಿಲ್ಲ.
ಈ ಶಾಲೆಯ ಹಳೇ ಕಟ್ಟಡವನ್ನು ಒಡೆದು ಹಾಕಲು ಸರ್ಕಾರ ಆದೇಶ ನೀಡಿದೆ. ಆದರೆ, ಇದುವರೆಗೂ ಅದನ್ನು ಸಂಬಂಧಿಸಿದ ಅಧಿಕಾರಿಗಳು ಜಾರಿ ಮಾಡಿಲ್ಲ. ಇದೀಗ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಪ್ರಕರಣನ್ನು ಕುಂಸಿ ಠಾಣೆಯಲ್ಲಿ ದಾಖಲಿಸಲಾಗಿದೆ.