ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹರಿಕುಮಾರ್‌ಗೆ ಬೀಳ್ಕೊಡುಗೆ

Rashmi Kasaragodu
Updated On : 30 Jul 2013, 11:15 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.28
ಅದೊಂದು ಭಾವಪೂರ್ಣ ಸಮಾರಂಭ. ಕಳೆದ 13 ವರ್ಷದಿಂದ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯನ್ನು ಬೀಳ್ಕೊಡುವ ಘಳಿಗೆ. ಒಂದು ಕಡೆ ಬೇಸರ, ಮತ್ತೊಂದು  ಕಡೆ ಉನ್ನತ ಹಂತಕ್ಕೆ ಹೊರಟ ಅಧಿಕಾರಿಯನ್ನು ಕಳುಹಿಸಿಕೊಡುವ ಖುಷಿ. ಒಟ್ಟಾರೆ ಸಂಭ್ರಮ- ಬೇಸರದ ಮಿಳಿತವಾದ ಸಮಾರಂಭ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯ ನಿರ್ದೇಶಕರಾಗಿ ಗಮನಾರ್ಹ ಸೇವೆ ಸಲ್ಲಿಸಿದ ಎನ್. ಹರಿಕುಮಾರ್ ಅವರನ್ನು ನಗರದ ಹಲವು ಸಂಘ ಸಂಸ್ಥೆಗಳು ಭಾನುವಾರ ಭಾವಪೂರ್ಣವಾಗಿ ಬೀಳ್ಕೊಟ್ಟವು. ರವೀಂದ್ರನಗರ ಗಣಪತಿ ದೇವಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸಂಘಸಂಸ್ಥೆಗಳ ಪ್ರಮುಖರು ವರ್ಗಾವಣೆಗೊಂಡ ಹರಿಕುಮಾರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿ, ನುಡಿ ನಮನ ಅರ್ಪಿಸಿದರು.
ಸೂಕ್ತ ಮಾಹಿತಿ: ಈ ಸಂದರ್ಭದಲ್ಲಿ ಮಾತನಾಡಿದ ಹರಿಕುಮಾರ್, ಸರ್ಕಾರಿ ಕಚೇರಿಗೆ ಬರುವ ಜನರಿಗೆ ಇಲಾಖೆ ಸಿಬ್ಬಂದಿ ಸ್ಪಂದಿಸಿ ಅವರಿಗೆ ಸೂಕ್ತ ಮಾಹಿತಿ ನೀಡಬೇಕು. ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿದ್ದಾಗ ಬರುವ ಜನರಿಗೆ, ಸಿಬ್ಬಂದಿ ಸರಿಯಾಗಿ ಮಾರ್ಗದರ್ಶನ ನೀಡಬೇಕು. ಬೇಜವಾಬ್ದಾರಿ ಉತ್ತರಗಳಿಂದಾಗಿ ಜನರಿಗೆ ಸರ್ಕಾರಿ ಕಚೇರಿ ಬಗ್ಗೆ ಇರುವ ಗೌರವ ಕಡಿಮೆಯಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ ನಂತರ ನನ್ನ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದರಲ್ಲದೇ, ಸರ್ಕಾರಿ ನೌಕರನಾಗಿ ನನ್ನ ಕೆಲಸವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ಇದೆ. 13ವರ್ಷ ಶಿವಮೊಗ್ಗದಲ್ಲಿ ಕೆಲಸ ಮಾಡಿದ್ದೇ ತಿಳಿಯಲಿಲ್ಲ. ಇಲ್ಲಿನ ಜನರ ಸಹಕಾರ ಉತ್ತಮವಾಗಿದೆ ಎಂದು ತಮ್ಮ ಸೇವಾ ಅವಧಿಯ ದಿನಗಳನ್ನು ಮೇಲುಕು ಹಾಕಿದರು.
ಈ ಹಿಂದೆ ನಿರಾಸಕ್ತಿ ಇತ್ತು: ಮನೋವೈದ್ಯ ಡಾ.ಕೆ.ಆರ್. ಶ್ರೀಧರ್ ಮಾತನಾಡಿ, ಮೈಸೂರಿಗಿಂತಲೂ ಜಾಸ್ತಿ ಎನಿಸುವಷ್ಟು ಶಿವಮೊಗ್ಗದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಕಡಿಮೆಯಾಗಿದ್ದವು. ಅಧಿಕಾರಿಗಳ ನಿರಾಸಕ್ತಿ, ಕಾರ್ಯಕ್ರಮಗಳ ಸಂಘಟಕರಿಗೆ ದೊರೆಯದಿದ್ದ ನೆರವು ಇದಕ್ಕೆ ಕಾರಣವಾಗಿತ್ತು ಎಂದರು.
ಆದರೆ ಹರಿಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯಾಗಿ ಬಂದ ನಂತರ ಶಿವಮೊಗ್ಗದಲ್ಲಿ  ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು ಎಂದರು.
ಇಂದು ಹಣ ಗಳಿಕೆಯ ಹಿಂದೆ ಎಲ್ಲರೂ ಹೋಗುತ್ತಿದ್ದಾರೆ. ಆದರೆ ಮಾನಸಿಕ ಶಾಂತಿ ಮಾತ್ರ ಯಾರಿಗೂ ಸಿಗುತ್ತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಮಾನಸಿಕ ಶಾಂತಿಯನ್ನು ತುಂಬಬಲ್ಲವು. ಈ ನಿಟ್ಟಿನಲ್ಲಿ ಹರಿಕುಮಾರ್ ನೀಡಿದ ಸಹಕಾರ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಆಯೋಜಕರಿಗೆ ವರವಾಗಿತ್ತು ಎಂದರು.ಇದೇ ವೇಳೆ ಹರಿಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಅಭ್ಯುದಯ ಸಂಸ್ಥೆಯ ಲಕ್ಷ್ಮೀನಾರಾಯಣ ಕಾಶಿ,ಅ.ಪ. ರಾಮಭಟ್ಟ, ರಮಾಶಾಸ್ತ್ರಿ, ದತ್ತಮೂರ್ತಿ ಭಟ್, ಡಾ. ರತ್ನಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement