ಕಾಲ ನಮಗಿಂದು ದುಃಖ ಕೊಟ್ಟಿದೆ: ಪಟ್ಟಾಭಿರಾಮ್
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.30
ಕಾಲ ನಮಗಿಂದು ದುಃಖವನ್ನು ಕೊಟ್ಟಿದೆ. ಹಾಗಂತ ಇದೇ ದುಃಖದಲ್ಲಿ ನಾವು ಮುಳುಗಿದರೆ ನಮ್ಮ ಮುಂದಿರುವ ಹಾಗೂ ಮೈಲಾರಿ ಕೈಗೊಂಡಿದ್ದ ಈಶ್ವರೀಯ ಕಾರ್ಯ ಅರ್ಧಕ್ಕೆ ನಿಲ್ಲುವಂತಾಗುತ್ತದೆ.
ಭಯವನ್ನು ಕೊಡುವವನೂ ಹಾಗೂ ಅದನ್ನು ನಾಶ ಮಾಡುವವನು ಭಗವಂತನೇ. ಹೀಗಾಗಿ ಒಂದು ಕೈಯಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಮತ್ತೊಂದು ಕೈಯಲ್ಲಿ ಮೈಲಾರಿಯವರ ರಾಯಭಾರಿಗಳಂತೆ ಸೇವಾ ಚಟುವಟಿಕೆಯಲ್ಲಿ ನಾವು ತೊಡಗಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಬೌದ್ಧಿಕ ಪ್ರಮುಖ್ ಪಟ್ಟಾಭಿರಾಮ್ ಅಭಿಪ್ರಾಯಪಟ್ಟರು.
ನಗರದ ಮಾಧವ ನೆಲೆಯ ಸಂಚಾಲಕ ಮೈಲಾರಿಯವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಾಧವ ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಸಾಗರ್ ಮಾತನಾಡಿ, ಜೀವಿತಾವಧಿಯಲ್ಲಿ ಅಷ್ಟೇ ಅಲ್ಲದೆ ಮರಣದಲ್ಲಿ ಕೂಡ ಮೈಲಾರಿಯವರು ತಮ್ಮ ಶರಣತ್ವವನ್ನು ದರ್ಶನ ಮಾಡಿಸಿದ್ದಾರೆ. ಅವರಲ್ಲಿದ್ದ ಸೇವಾ ಮನೋಭಾವ, ಕಾರ್ಯತ್ಪರತೆ ಸಮಾಜಕ್ಕೆ ಮಾದರಿ ಎಂದು ಹೇಳಿದರು.
ವಿಕಾಸ ಟ್ರಸ್ಟ್ ಕಾರ್ಯದರ್ಶಿ ನಟರಾಜ ಭಾಗವತ್ ಮಾತನಾಡಿ, ಮೈಲಾರಿ ಅವರಿಲ್ಲದ ಮಾಧವ ನೆಲೆಯನ್ನು ಊಹಿಸಿಕೊಳ್ಳುವುದೂ ಕಷ್ಟ ಎಂದರು.
ವಿಕಾಸ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ, ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಬೆನಕಭಟ್, ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ನಿರ್ಮಲಕುಮಾರ್, ಆರ್ಎಸ್ಎಸ್ನ ದಕ್ಷಿಣ ಪ್ರಾಂತದ ಸಹ ಪ್ರಾಂತ ಪ್ರಚಾರಕ್ ಸುಧೀರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಭೆಯಲ್ಲಿ ಹಾಜರಿದ್ದರು.