ಬೈಪಾಸ್ ಸರ್ಜರಿ ಯಶಸ್ವಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜು.30
ನಗರದ ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯರ ತಂಡ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಅಯೋರ್ಟೊ ಬೈ ಫ್ಯೂಮೊರಲ್ ಬೈಪಾಸ್ ಸರ್ಜರಿ ಮಾಡಿದೆ.
ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಸಂಸ್ಥೆಯ ರಕ್ತನಾಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀಶರಾವ್ ನೇತೃತ್ವದ ತಂಡ, ಡಾ. ಅಜಿತ್ಕುಮಾರ್ಶೆಟ್ಟಿ ನೇತೃತ್ವದ ಅರವಳಿಕೆ ತಜ್ಞರ ತಂಡ ಹಾಗೂ ಡಾ. ಚಕ್ರವರ್ತಿ ನೇತೃತ್ವದ ಸರ್ಜಿಕಲ್ ಐಸಿಯು ತಂಡ ಈ ಚಿಕಿತ್ಸೆ ಮಾಡಿದೆ.
ಅಯೋರ್ಟೊ (ಮಹಾಪದಮನಿ)ಯು ಹೃದಯದಿಂದ ದೇಹದ ಎಲ್ಲಾ ಭಾಗಕ್ಕೆ ರಕ್ತಪೂರೈಸುವ ಪ್ರಮುಖ ರಕ್ತನಾಳವಾಗಿದೆ. ಸಿಗರೇಟು- ಬೀಡಿ, ತಂಬಾಕು ಸೇವನೆ, ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವ ರೋಗಿಗಳ ಮಹಾಪದಮನಿಯು ಮುಚ್ಚುವ (ಬ್ಲಾಕ್) ಸಾಧ್ಯತೆ ಇರುತ್ತದೆ. ಮಹಾಪದಮನಿಯು ಮುಚ್ಚುವುದರಿಂದ ದೇಹದ ಅಂಗಾಂಗಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಕಾಲಿನ ಕೆಳಭಾಗಕ್ಕೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ.
ಕ್ರಮೇಣ ನೋವು ದ್ವಿಗುಣ: ಈ ರೋಗ ಲಕ್ಷಣದ ಆರಂಭಿಕ ಹಂತದಲ್ಲಿ ರೋಗಿ ನಡೆದಾಡುವಾಗ ಕಾಲಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ವೇಳೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಕ್ರಮೇಣ ನೋವು ದ್ವಿಗುಣಗೊಳ್ಳುತ್ತದೆ. ರೋಗ ಲಕ್ಷಣ ತೀವ್ರಗೊಂಡರೆ ನಡೆದಾಡುವಾಗ ಮಾತ್ರವಲ್ಲ, ವಿಶ್ರಾಂತಿ ತೆಗೆದುಕೊಳ್ಳುವ ವೇಳೆಯೂ ತೀವ್ರ ರೀತಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ ನೀಡಿದ್ದರೆ ಇದು ಗಂಭೀರ ಸ್ಥಿತಿಗೆ ಬಂದು ಗ್ಯಾಂಗ್ರಿನ್ ಆಗಿ, ರೋಗಿಯು ಅಂಗಾಂಗಳನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಅಯೋರ್ಟೊ ಬೈ ಫ್ಯೂಮೊರಲ್ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಇಂತಹ ರೋಗಕ್ಕೆ ಇರುವ ಉತ್ತಮ ಚಿಕಿತ್ಸಾ ಕ್ರಮ ಇದಾಗಿದೆ. ಇಲ್ಲಿ ಬ್ಲಾಕ್ ಆದ ರಕ್ತನಾಳವನನ್ನು ಬೈಪಾಸ್ ಮಾಡಲಾಗುತ್ತದೆ. ಈ ಪ್ರಮುಖ ಶಸ್ತ್ರಚಿಕಿತ್ಸೆಯು ಬಿಪಿಎಲ್ ಕಾರ್ಡ್ದಾರರಿಗೆ ವಾಜಪೇಯಿ ಆರೋಗ್ಯಶ್ರೀ ಹಾಗೂ ರೈತಾಪಿ ವರ್ಗದ ಜನರಿಗೆ ಯಶಸ್ವಿನಿ ಯೋಜನೆಯಡಿಯಲ್ಲಿ ರೋಗಿಗಳು ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಸಾರ್ವಜನಿಕರು ರೋಗದ ಆರಂಭದಲ್ಲೇ ಅಥವಾ ರೋಗ ಈಗಾಗಲೇ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು ಎಂದು ಆಸ್ಪತ್ರೆ ತಿಳಿಸಿದೆ.