ವಿಜೃಂಭಣೆಯ ಹರೋಹರ ಜಾತ್ರೆ
ಶಿವಮೊಗ್ಗ: ಹರೋಹರ ಜಾತ್ರೆ ಮಂಗಳವಾರ ನಗರದ ಗುಡ್ಡೇಕಲ್ನಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಸಲ್ಲಿಸಿದರು. ಜಾತ್ರೆ ಅಂಗವಾಗಿ ಗುಡ್ಡೇಕಲ್ ಆವರಣದಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಮಂಗಳವಾರ ಮುಂಜಾನೆಯಿಂದಲೇ ಅಭಿಷೇಕ, ಪುಷ್ಪಾರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯನಡೆದವು. ಹರಕೆ ಹೊತ್ತ ಭಕ್ತರು ಹರೋಹರ ಎಂದು ಕೂಗುತ್ತಲೇ ಕಾವಡಿಯೊಂದಿಗೆ ಬಾಯಿಗೆ ಸ್ವಾಮಿಯ ತ್ರಿಶೂಲ ಚುಚ್ಚಿಕೊಂಡು ದೇವಾಲಯಕ್ಕೆ ಬಂದು ಹರಕೆ ತೀರಿಸಿದರು. ಕೆಲವರು ಬೆನ್ನಿಗೆ ಕೊಕ್ಕೆ ಚುಚ್ಚಿಕೊಂಡು ರಥ ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು. ತಮಿಳು ಜನಾಂಗದವರ ವಿಶೇಷ ಹಬ್ಬ ಇದ್ದಾಗಿದ್ದು, ಇತರೆ ಜಾತಿ, ಧರ್ಮದ ಜನರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಮಂಗಳವಾರ ಹರೋಹರ ಜಾತ್ರೆ ನಡೆದರೆ, ಬುಧವಾರ ಆಡಿಕೃತ್ತಿಕೆ ಉತ್ಸವ ಇರುತ್ತದೆ. ಅಂದೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
ಭದ್ರತೆ: ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ಬಿಗಿ ಭದ್ರತೆ ನೀಡಿದ್ದು, ಅಲ್ಲಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಆಗುವುದರಿಂದ ಸಂಚಾರಿ ಪೊಲೀಸರನ್ನು ದೇವಾಲಯ ರಸ್ತೆಗಳಲ್ಲಿ ನಿಯೋಜಿಸಿದೆ.