ಸಮಾಜ ತಿದ್ದುವ ಕಾರ್ಯದಲ್ಲಿ ಗುರುವಿನ ಪಾತ್ರ ಮುಖ್ಯ'
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಜು.30
ಸಮಾಜ ತಿದ್ದುವ ಕಾರ್ಯದಲ್ಲಿ ಗುರುವಿನ ಪಾತ್ರ ಮುಖ್ಯವಾಗಿದ್ದು, ಶಿಕ್ಷಕ ವೃಂದ ಸಮರ್ಥವಾಗಿ ನಿಭಾಯಿಸಿದಾಗ ಸದೃಢ ಸಮಾಜ ನಿರ್ಮಿಸಬಹುದಾಗಿದೆ ಎಂದು ತಾಲೂಕಿನ ಮಾರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಗಾಯತ್ರಿ ಶೇಷಾಚಲರಾವ್ ತಿಳಿಸಿದರು.
ನಿವೃತ್ತಿ ಹಿನ್ನಲೆಯಲ್ಲಿ ಮಂಗಳವಾರ ಗ್ರಾಮದ ಶಾಲೆಯ ಶಾಲಾಭಿವೃದ್ದಿ ಸಮಿತಿ, ಶಿಕ್ಷಕ ಸಿಬ್ಬಂದಿಯಿಂದ ಬೀಳ್ಕೊಡಿಗೆ ಸ್ವೀಕರಿಸಿ ಮಾತನಾಡಿ, ಸಮಾಜದ ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ನಿರಂತರ ಮಕ್ಕಳ ಜತೆಗಿನ ಸಂಪರ್ಕ, ಒಡನಾಟದಿಂದ ಶಿಕ್ಷಕ ಪರಿಪೂರ್ಣನಾಗಲಿದ್ದಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜವಾಗಿದೆ.
ಮಕ್ಕಳಿಗೆ ಬೋಧಿಸುವ ಉತ್ತಮ ಅವಕಾಶ ಹೊಂದಿರುವ ಶಿಕ್ಷಕರು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಸನ್ಮಾರ್ಗದ ನಡತೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ತಿಳಿಹೇಳುವ ಮೂಲಕ ಭವಿಷ್ಯದಲ್ಲಿ ಸಂಪೂರ್ಣ ಸಮಾಜ ಬದಲಾಯಿಸುವ ಶಕ್ತಿ ಹೊಂದಿದ್ದು ಈ ದಿಸೆಯಲ್ಲಿ ನಿವೃತ್ತ ಶಿಕ್ಷಕಿ ಗಾಯತ್ರಿರವರು ತಮ್ಮ ಜವಾಬ್ದಾರಿ, ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಪ್ರಶಂಸಿಸಿದರು.
ಶಿಕ್ಷಕ ಮಹೇಶಪ್ಪ ಬಂಡಿಭೈರನಹಳ್ಳಿ ನಿವೃತ್ತ ಶಿಕ್ಷಕಿ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಂಜುಳ, ಸದಸ್ಯ ಶಿವಪ್ಪ, ರುದ್ರಗೌಡ, ರವಿಕುಮಾರ್, ನೀಲಮ್ಮ, ಸರೋಜಮ್ಮ, ಗ್ರಾಮಸ್ಥರು ಭಾಗವಹಿಸಿದ್ದರು.