ಸಮಾಜ ಸೇವಕ ಮೈಲಾರಿ ನಿಧನ
ಶಿವಮೊಗ್ಗ: ಮಾಧವ ನೆಲೆ ಮೂಲಕ ಚಿಂದಿ ಆಯುವ ಮಕ್ಕಳ ಪೋಷಕರೆನಿಸಿದ್ದ ಸಮಾಜ ಸೇವಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಮೈಲಾರಿ (55) ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೆಳಗ್ಗೆ 7.30ರ ಸುಮಾರಿಗೆ ವಿನೋಬ ನಗರದಲ್ಲಿರುವ ಮಾಧವ ನೆಲೆಗೆ ಹೊರಟಿದ್ದಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿ ನೆಲಕ್ಕುರುಳಿ ಬಿದ್ದಿದ್ದು, ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಎದುರಿಗೆ ಬಂದ ಲಾರಿಯನ್ನು ನೋಡಿ ಗಾಬರಿಗೊಂಡು ತಮ್ಮ ವಾಹನದ ಬ್ರೇಕ್ ಹಾಕಿದ್ದರಿಂದಾಗಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಆರ್ಎಸ್ಎಸ್ ಹಾಗೂ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆಗೆ ಧಾವಿಸಿಬಂದರು.
ಮರಣೋತ್ತರ ಪರೀಕ್ಷೆ ನಂತರ ಮಧ್ಯಾಹ್ನ ಮಾಧವ ನೆಲೆಯಲ್ಲಿ ಮೃತ ದೇಹವನ್ನು ಇಟ್ಟು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
3 ಗಂಟೆಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಮೈಲಾರಿಯವರ ಆಶಯದಂತೆ ಕಣ್ಣುಗಳೆರಡನ್ನೂ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.
ಸಂತಾಪ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಸಮಾಜ ಸೇವಕ ಮೈಲಾರಿ (ಮೈಲಾರಣ್ಣ) ನವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಬಿಜೆಪಿ ಹೇಳಿದೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಕೃಷ್ಣಭಟ್, ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ನಗರ ಬಿಜೆಪಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಪ್ರಧಾನ ಕಾರ್ಯದರ್ಶಿ ಎನ್.ಜಿ. ನಾಗರಾಜ್, ಎಸ್.ಎಸ್. ನಂಜುಂಡಸ್ವಾಮಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಪ್ರಮುಖ ನಾಯಕರಾದ ಗಿರೀಶ್ ಪಟೇಲ್, ಎಸ್.ಎನ್. ಚನ್ನಬಸಪ್ಪ, ಎನ್.ಜೆ. ರಾಜಶೇಖರ್, ಎ.ಎನ್. ನಟರಾಜ್, ಡಿ. ಸೋಮಸುಂದರಂ, ಬಿ.ಆರ್. ಮದುಸೂಧನ, ಹಿರಿಯರಾದ ಟಿ.ಜಿ. ಶ್ರೀಧರರಾವ್, ಎ.ಎಸ್. ಪದ್ಮನಾಭ ಭಟ್, ದೇವದಾಸ್ ಎನ್. ನಾಯಕ್ ಹಾಗೂ ಪಕ್ಷದ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.