ಆಷಾಢ ನಂತರ ಸ್ಪರ್ಧೆ ತೀರ್ಮಾನ
ಕ.ಪ್ರ.ವಾರ್ತೆ ಶಿವಮೊಗ್ಗ ಜು.31
ಮುಂದಿನ ಲೋಕಸಭೆ ಚುನಾವಣೆಗೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಗೊಂದಲ ಇದೆ. ಆದ್ದರಿಂದ ಆಷಾಡ ಮುಗಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಬುಧವಾರ ಗಾಜನೂರಿನ ತುಂಗಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆಯೂ ಆಷಾಡ ನಂತರ ಚರ್ಚಿಸಲಾಗುವುದು ಎಂದರು.
ಚಿತ್ರಣ ಬೇರೆಯಾಗಿದೆ: ಮೊದಲು ಲೋಕಸಭೆ ಚುನಾವಣೆಯ ವಾತಾವರಣರವೇ ಬೇರೆ ಇತ್ತು. ಈಗ ಚಿತ್ರಣ ಬೇರೆಯಾಗಿದೆ. ಆದರಿಂದ ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆಯುತ್ತಿದ್ದು, ಜಿಲ್ಲೆಯಲ್ಲಿನ ಎಲ್ಲಾ ಕ್ಷೇತ್ರಗಳನ್ನು ಸುತ್ತಿ ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆನೆ ಎಂದು ಹೇಳಿದರು.
ಪರಿಹಾರಕ್ಕೆ ಆಗ್ರಹ: ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಕೆಲವೆಡೆ ಅತಿವೃಷ್ಟಿ ಉಂಟಾಗಿದೆ. ಸೊರಬ, ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಸುಮಾರು 15 ಕೋಟಿಗಿಂತಲೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಶಾಶ್ವತ ಪರಿಹಾರ ಒದಗಿಸಿ: ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿರುವ ಅನುದಾನ ತಾತ್ಕಾಲಿಕ ಎಂಬ ಭಾವನೆ ಅಧಿಕಾರಿ ವರ್ಗದಲ್ಲಿದೆ. ಹಾಗಾಗಿ ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ಯಾಸೆಂಜರ್ಗೆ ಅನುಮತಿ: ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗದ ಸರ್ವೆ ಆಗಿದೆ. ಆದರೆ, ಮುಂದೆ ಪ್ರಗತಿ ಆಗಿಲ್ಲ. ಶಿವಮೊಗ್ಗ- ಶಿಕಾರಿಪುರ ರೈಲ್ವೆ ಮಾರ್ಗದ ಸರ್ವೆ ಬಗ್ಗೆ ಪ್ರಸ್ತಾವನೆಯನ್ನು ರೈಲ್ವೆ ಸಚಿವರಿಗೆ ನೀಡಲಾಗಿದೆ. ಇದು ಕೂಡ ಆರಂಭಗೊಂಡಿಲ್ಲ. ಗ್ರಾಮೀಣ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿವಮೊಗ್ಗ- ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಒಪ್ಪಿಗೆ ದೊರೆತ್ತಿದ್ದು, ಆ.3ರಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಮೈಸೂರು ಪ್ಯಾಸೆಂಜರ್ ರೈಲು ತಾಳಗುಪ್ಪಕ್ಕೆ ವಿಸ್ತರಣೆಯಾಗಲಿದೆ ಎಂದು ಹೇಳಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕೆಜೆಪಿ ಮುಖಂಡರಾದ ಎಸ್. ರುದ್ರೇಗೌಡ, ಎಸ್.ಎಸ್. ಜ್ಯೋತಿಪ್ರಕಾಶ್ ಮತ್ತಿತರರು ಇದ್ದರು.