ಅರಣ್ಯೀಕರಣದೊಂದಿಗೆ ಆದಾಯ ಹೆಚ್ಚಳ
ಕ.ಪ್ರ.ವಾರ್ತೆ ಭದ್ರಾವತಿ ಜೂ.1
ಕರ್ನಾಟಕ ಸರ್ಕಾರ 2011-12ರಲ್ಲಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಾಕಷ್ಟು ಚರ್ಚೆ ನಡೆಸಿ, ಅರಣ್ಯೀಕರಣದೊಂದಿಗೆ ರೈತನ ಆದಾಯವನ್ನೂ ಗಣನೀಯವಾಗಿ ಹೆಚ್ಚಿಸಬಹುದಾಗಿದೆ ಎಂಬ ಅಂಶವನ್ನು ಖಚಿತಪಡಿಸಿಕೊಂಡು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತಂದಿತು ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಪಾಟೀಲ್ ತಿಳಿಸಿದರು.
ಪಟ್ಟಣದ ಎಂಪಿಎಂ ಅತಿಥಿ ಗೃಹದಲ್ಲಿ ಶನಿವಾರ ನಡೆದ ಒಂದು ದಿನದ ವಿಭಾಗ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಅಳತೆಯ ಸಸಿಗಳಿಗೆ ತಲಾ ರು. 1 ಮತ್ತು ರು. 3ಕ್ಕೆ ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ತಮ್ಮ ಕೃಷಿ ಭೂಮಿಯಲ್ಲಿ 1,000 ಸಸಿ ನೆಡುವ ರೈತರು ಅಂದಾಜು ರು. 5,50,000 ಗಳನ್ನು ಗಳಿಸಬಹುದು. ಈ ಯೋಜನೆಯಡಿ ಸಸಿಯನ್ನು ಪೋಷಿಸಲೂ ಸಹ ಹಣವನ್ನು ರೈತರಿಗೆ ನೀಡಲಾಗುವುದೆಂದು ಅವರು ತಿಳಿಸಿದರು.
ಅತಿ ಹೆಚ್ಚು ವಿತರಣೆ: ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ವಿಭಾಗದಲ್ಲಿ 6.86 ಸಸಿಗಳನ್ನು ವಿತರಿಸಲಾಗಿದ್ದು, ಇದು ಜಿಲ್ಲೆಯಲ್ಲೇ ಅತಿ ಹೆಚ್ಚು ವಿತರಣೆಯಾದ ಸಸಿಗಳು. ಸರ್ಕಾರೇತರ ಸಂಸ್ಥೆಗಳನ್ನೂ ಸಹ ಸಸಿಗಳ ವಿತರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷಿ ಇಲಾಖೆ ಅಧಿಕಾರಿ ಕಾಶಿನಾಥ್ ಮಾತನಾಡಿ, ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮೇ ತಿಂಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ 193 ಮಿ.ಮೀ. ಮಳೆಯಾಗಿದ್ದು, ರೈತರು ಭೂಮಿಯನ್ನು ಬಿತ್ತಲು ಹಸನು ಮಾಡಿಕೊಳ್ಳುತ್ತಿದ್ದಾರೆ. ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿ ವಿಧಾನ ಅನುಸರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಭೂಚೇತನ ಯೋಜನೆ: ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆ ಭೂಚೇತನ ಯೋಜನೆ ಜಾರಿಗೊಳಿಸಿದ್ದು, ರೈತರಿಗೆ ಭೂ ಫಲವತ್ತತೆ ಬಗ್ಗೆ ಅರಿವು ಮೂಡಿಸಲು ಹಾಗೂ ಸಾವಯವ ಕೃಷಿ ವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಯೊಂದು ಗ್ರಾಮಕ್ಕೆ ಭೂಚೇತನ ರಥವನ್ನು ಕೊಂಡೊಯ್ದು ಅಲ್ಲಿ ವಿಶೇಷ ಕಾರ್ಯಕ್ರಮ ಮತ್ತು ಹಸ್ತಪ್ರತಿಗಳನ್ನು ಹಂಚಲಾಗುತ್ತಿದೆ ಎಂದರು.
ಸಾರಜನಕ, ರಂಜಕ ಮತ್ತು ಪೊಟಾಶ್ ನಂತರ ರಾಸಾಯನಿಕ ಗೊಬ್ಬರಗಳನ್ನು ಮಾತ್ರ ರೈತರು ಭೂಮಿಗೆ ನೀಡುತ್ತಿರುವ ಫಲವಾಗಿ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಸಾವಯವ ಗೊಬ್ಬರದ ಬಳಕೆ ಕಡಿಮೆಯಾಗಿರುವುದರಿಂದ ಮಣ್ಣಿನ ಸತ್ವವೂ ಕಡಿಮೆಯಾಗಿದೆ. ಭೂಮಿಯ ಫಲವತ್ತತೆ ಹೆಚ್ಚಿದರೆ ಇಳುವರಿ ಹೆಚ್ಚುತ್ತದೆ ಎಂದವರು ಈ ಸಂದರ್ಭದಲ್ಲಿ ತಿಳಿಸಿದರು.
ಗಮನ ಅನಿವಾರ್ಯ: ರಾಜ್ಯದ ಜನಸಂಖ್ಯೆ 6.1 ಕೋಟಿ ಮುಟ್ಟಿರುವಾಗ ಆಹಾರ ಉತ್ಪಾದನೆ ಹೆಚ್ಚು ಮಾಡುವತ್ತ ಗಮನವೀಯುವುದು ಅನಿವಾರ್ಯವಾಗಿದೆ. ಆದ್ದರಿಂದ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಲು ಭೂಚೇತನ ರಥಯಾತ್ರೆಗೆ ಶಾಸಕ ಎಂ.ಜೆ. ಅಪ್ಪಾಜಿಯವರು ಚಾಲನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ರಮೇಶ್ ಮಾತನಾಡಿ, ರೈತರಲ್ಲಿ ಅನುಕರಣೆ ಭಾವನೆ ಹೆಚ್ಚಾಗಿರುತ್ತದೆ. ಯಾವುದಾದರೂ ಯೋಜನೆ ಜಾರಿಗೊಂಡರೆ ಅದನ್ನು ಯಾರಾದರೂ ಮೊದಲು ಅನುಷ್ಠಾನಗೊಳಿಸಲಿ ನಂತರ ತಾವು ಅನುಕರಣೆ ಮಾಡೋಣವೆಂಬ ಮನೋಭಾವ ತಾಳಿರುತ್ತಾರೆ. ಆದರೆ ಅದು ತಪ್ಪು.
ಸರ್ಕಾರದ ಯೋಜನೆಗಳ ಫಲವನ್ನು ಪಡೆಯಲು ರೈತರು ಮೊದಲಿಗರಾಗಬೇಕು ಎಂದು ಅವರು ಹೇಳಿದರು. ಗೊಬ್ಬರ, ಕೀಟನಾಶಕ: ಅರಣ್ಯ ಇಲಾಖೆ ನೀಡುತ್ತಿರುವ ಹಲವು ಸಸಿಗಳನ್ನು ಹೇಗೆ ರೈತರು ತಮ್ಮ ತೋಟಕ್ಕೆ ಬೇಲಿಯಾಗಿ ಬಳಸುವುದರೊಂದಿಗೆ ತಮ್ಮ ತೋಟಕ್ಕೆ ಅವುಗಳನ್ನು ಗೊಬ್ಬರದ ಮೂಲ ಮತ್ತು ಕೀಟನಾಶಕಗಳಾಗಿ ಸಹ ಬಳಸಬಹುದೆಂಬ ಬಗ್ಗೆ ಅವರು ಮಾಹಿತಿ ನೀಡಿದರು. ಹೊಂಗೆ ಮರ ಉತ್ತಮ ಬೇಲಿಯೊಂದಿಗೆ ಗೊಬ್ಬರವನ್ನು ನೀಡುವುದು. ಬೇವಿನ ಮರ ಉತ್ತಮ ಬೇಲಿಯಾಗುವುದರೊಂದಿಗೆ ಕೀಟನಾಶಕವೂ ಹೌದು. ದಾಳಿಂಬೆ ತೋಟಕ್ಕೆ ಬೇವಿನ ಮರದ ಬೇಲಿ ವಿಶೇಷವಾದ ಕೀಟನಾಶಕ ಎಂದು ಅವರು ಉದಾಹರಿಸಿದರು. ಅಡಕೆ ಮರಗಳ ನಡುವೆ ಶ್ರೀಗಂಧ, ಜಾಯಿಕಾಯಿ, ಬಾಳೆ ಮರಗಳನ್ನು ನೆಡುವುದರಿಂದ ರೈತರು ತಮ್ಮ ಆರ್ಥಿಕತೆಯನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದರು.
ತರೀಕೆರೆ ಎ.ಸಿ.ಎಫ್‌ಬಿ. ಕೆ. ರೆಡರ್ಸ್ ಮಾತನಾಡಿದರು. ಮಂಜುನಾಥ್ ಪ್ರಾರ್ಥಿಸಿದರು. ವಲಯ ಅರಣ್ಯಾಧಿಕಾರಿ ಮುಕುಂದಚಂದ್ರ ಸ್ವಾಗತಿಸಿದರು. ಎ.ಸಿ.ಎಫ್ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್. ಜಯಣ್ಣ ನಿರೂಪಿಸಿದರು. ಭದ್ರಾವತಿ ವಿಭಾಗದ ವಲಯ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.