ಸ್ವಾರ್ಥಕ್ಕೆ ಪಕ್ಷ ಬಳಸಿಕೊಂಡ ಬಿಎಸ್ವೈ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.1
ಬಿ.ಎಸ್. ಯಡಿಯೂರಪ್ಪನವರನ್ನು ಮತ್ತೆ ಪಕ್ಷಕ್ಕೆ ವಾಪಾಸ್ ಕರೆತರುವ ಪ್ರಯತ್ನ ಮಾಡುತ್ತಿರುವುದು ತಿಳಿದು ನಮ್ಮ ಮನಸ್ಸಿಗೆ ಬಹಳ ನೋವುಂಟಾಗಿದೆ. ಇಡೀ ಪಕ್ಷದ ಎಲ್ಲಾ ಅಧಿಕಾರವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಚಾರ ಮಾಡಿ ಜೈಲಿಗೂ ಹೋಗಿಬಂದ, ಪಕ್ಷದ ಬೆನ್ನಿಗೆ ಚೂರಿ ಹಾಕಿದ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಪುನಃ ಕರೆತರಬಾರದು ಬಿಜೆಪಿ ಹಿರಿಯ ಧುರೀಣ ಟಿ.ಜಿ. ಶ್ರೀಧರರಾವ್ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ, ನಾನಿಲ್ಲದೇ ಪಕ್ಷವಿಲ್ಲ ಎಂಬ ಮನೋಭಾವ ಬೆಳೆಸಿಕೊಂಡ ಯಡಿಯೂರಪ್ಪರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಬಗೆದ ವ್ಯಕ್ತಿಯನ್ನು ಮರಳಿ ಕರೆಸುವುದು ಸರಿಯಲ್ಲ ಎಂದ ಅವರು, ಒಂದು ವೇಳೆ ಕೆ.ಎಸ್. ಈಶ್ವರಪ್ಪ ಈ ಹಂತಕ್ಕೆ ತಲುಪಿದರೆ ಅವರನ್ನು ಕೂಡ ಪಕ್ಷದಿಂದ ಹೊರ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಪಕ್ಷಕ್ಕೆ ಕಳಂಕ: ಅವರನ್ನು ಬಿಜೆಪಿ ಪಕ್ಷದಲ್ಲಿ ಬೆಳೆಸಿದವರೇ ನಾವುಗಳು. ಇದೀಗ ಅದರ ತಪ್ಪಿನ ಅರಿವು ನಮಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿ.ಎಸ್. ಯಡಿಯೂರಪ್ಪ ದೊಡ್ಡ ನಾಯಕರಾಗುತ್ತಾರೆ ಎಂದು ತಿಳಿದು ಪಕ್ಷಕ್ಕೆ ತಂದು ಅಧಿಕಾರ ನೀಡಿದ್ದೆವು. ಆದರೆ, ನಮ್ಮ ಪಕ್ಷಕ್ಕೆ ದೇಶದಲ್ಲೇ ದೊಡ್ಡ ಕಳಂಕ ತಂದವರು. ಇದೀಗ ಬಿಜೆಪಿ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇಂತಹ ವ್ಯಕ್ತಿಯನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ನಮ್ಮಂತಹ ಸಾವಿರಾರು ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿ ಯಾರೋ ಒಬ್ಬ ಸ್ವಯಂ ಘೋಷಿತ ನಾಯಕರ ಶ್ರಮದಿಂದ ಆಗಿಲ್ಲ. ಅಲ್ಲದೇ, ನಾನೇ ಪಕ್ಷ ಕಟ್ಟಿದ ನಾಯಕ ಎಂದು ಹೇಳಿಕೊಳ್ಳುವ ಬಿ.ಎಸ್. ಯಡಿಯೂರಪ್ಪರಿಂದಲೂ ಆಗಿಲ್ಲ. ಅದು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಂದ ಆಗಿರುವುದು ಎಂದರು.
ಬಿಜೆಪಿಗೆ ಹಾನಿಯಿಲ್ಲ: ಬಿ.ಎಸ್.ವೈ ಮುಖ್ಯಮಂತ್ರಿಯಾದ ಮೇಲೆ ಕಾನೂನುಬಾಹಿರ ಕೆಲಸಗಳನ್ನು ಮಾಡಿದ್ದರಿಂದ ಜೈಲಿಗೆ ಹೋದರು. ಅಲ್ಲದೇ, ಪಕ್ಷದಿಂದ ಹೊರ ಹೋದ ನಂತರ ಅವರು ಮಾಡಿದ ಕೃತ್ಯಗಳಿಂದ ಅವರೇ ನಿರ್ನಾಮ ಆಗಿದ್ದಾರೆ.
ಇದರಿಂದ ಬಿಜೆಪಿಗೆ ಯಾವುದೇ ಹಾನಿಯಾಗಿಲ್ಲ. ಕಾರ್ಯಕರ್ತರು ಅವರು ಹೋದರೆಂದು ಧೃತಿಗೇಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ರಾಘವೇಂದ್ರರಾವ್ ಮತ್ತಿತರರು ಇದ್ದರು.