ಕಾರ್ಪೋರೇಟ್ ಜಗತ್ತಿಗೆ ಎಲ್ಲವೂ ಒತ್ತೆ...
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.2
ದಶಕಗಳ ಕಾಲ ಕೃಷಿಯಲ್ಲೇ ತೊಡಗಿಕೊಂಡ ರೈತನ ಅನುಭವವನ್ನು ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಕೆಪಿಎಸ್ಸಿಯ ಮೂಲಕ ಆಯ್ಕೆಯಾದ ವ್ಯಕ್ತಿಯೇ ಸರ್ವಜ್ಞನಾಗುತ್ತಾನೆ. ಐಎಎಸ್ ಅಧಿಕಾರಿಗಳು ರಾಜಕಾರಣಿಗಳು ನೀತಿ ರೂಪಿಸುತ್ತಾರೆ. ಇದೇ ದೇಶ ಈ ಸ್ಥಿತಿಗೆ ತಲುಪಲು ಕಾರಣ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಹೀ.ಚಿ. ಬೋರಲಿಂಗಯ್ಯ ಅಭಿಪ್ರಾಯಪಟ್ಟಿದ್ದಾರೆ.
8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ರೈತರ ಆತ್ಮವಿಶ್ವಾಸ ಕುಂದಿಸುವ ವ್ಯವಸ್ಥೆ ನಿರ್ಮಾಣ ಮಾಡಿದ್ದೇವೆ. ಇನ್ನಾದರೂ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದರು.
ಭೂಮಿ ಸೇರಿದಂತೆ ಎಲ್ಲವನ್ನೂ ಕಾರ್ಪೋರೇಟ್ ಜಗತ್ತಿಗೆ ಒತ್ತಿ ಇಡಲಾಗಿದೆ. ಈ ವಿಚಾರದಲ್ಲಿ ಸಾಹಿತಿಗಳು ಯೋಚನೆ ಮಾಡಲಿಲ್ಲ, ದನಿ ಎತ್ತಲಿಲ್ಲ ಎಂದರೆ ನಾಡಿಗೆ ಮಾಡುವ ದ್ರೋಹ ಎಂದು ಅಭಿಪ್ರಾಯಪಟ್ಟ ಅವರು, ನಾವು ದಂತ ಗೋಪುರದಲ್ಲಿ ಇದ್ದು ಬರೆದರೆ ಅದು ದ್ರೋಹವಾಗುತ್ತದೆ. ಆತ್ಮರತಿ ಬಿಟ್ಟು ಸಮಾಜ ಮುಖಿಯಾಗಿ ಬರೆಯಬೇಕು ಎಂದು ಹೇಳಿದರು.
ಪೋಷಕರ ಪರದಾಟ: ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ವ್ಯಾಪಾರೀಕರಣಕ್ಕಿಡಲಾಗಿದೆ. ದುಡ್ಡಿದ್ದವರಿಗೆ ಎಂಜಿನಿಯರಿಂಗ್, ಮೆಡಿಕಲ್ ಸೀಟು ಎಂಬ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಇಂದು ಅಕ್ಷರಸ್ಥರು ಅಹಂಕಾರಿಗಳಾಗುತ್ತಿದ್ದಾರೆ. ಆದರೆ, ಅನಕ್ಷರಸ್ಥರು ಅನುಭವದ ಮೂಲಕ ವಿವೇಕಿಗಳಾಗಿದ್ದಾರೆ ಎಂದ ಅವರು, ಬೆಂಗಳೂರಿನ 100 ಕಿಲೋಮೀಟರ್ ಸುತ್ತಳತೆಯಲ್ಲಿ ಹಳ್ಳಿಗಳು ಖಾಲಿಯಾಗಿವೆ. ಹಳ್ಳಿ ಅಭಿವೃದ್ಧಿ ಇಲ್ಲವಾಗಿದೆ. ಈ ಮೂಲಕ ರೈತರ ಆತ್ಮಬಲ ಕುಗ್ಗಿಸಲಾಗಿದೆ ಎಂದು ಹೇಳಿದರು.
ಹಣ ದೋಚುವ ಉದ್ದೇಶ: ರಾಜಕಾರಣಿಗಳು ಎಂತಹ ರಾಜ್ಯ ನಿರ್ಮಿಸಲು ಹೊರಟಿದ್ದಾರೆಂದರೆ, ಹಳ್ಳಿಯ ಸರ್ವನಾಶ ಮಾಡುತ್ತಿದ್ದಾರೆ. ಆಹಾರ ಮರೆಯುತ್ತಿದ್ದಾರೆ, ಹಣವನ್ನು ತಿಂದು ಬದುಕಲು ಆಗಲ್ಲ ಎಂದು ತಿಳಿದುಕೊಳ್ಳುತ್ತಿಲ್ಲ ಎಂದು ಟೀಕಿಸಿದ ಅವರು, ಎತ್ತರದ ಕಟ್ಟಡಗಳ ನಿರ್ಮಾಣ, ರಸ್ತೆ ನಿರ್ಮಿಸಿದರೆ ಅಭಿವೃದ್ಧಿಯಲ್ಲ. ಈ ಕಾರ್ಯದ ಹಿಂದೂ ರಾಜಕಾರಣಿಗಳ ಉದ್ದೇಶ ಇರುತ್ತದೆ. ಐದು ವರ್ಷ ಎಷ್ಟು ಹಣ ದೋಚಬಹುದೆಂಬ ಆಲೋಚನೆಯಲ್ಲಿರುತ್ತಾರೆ ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ವಿಶ್ವವಿದ್ಯಾಲಯಗಳು ಮನಸ್ಸು ಮಾಡಿದರೆ ಸಾಹಿತ್ಯ ಪ್ರಕಟಣೆ, ಸಂಶೋಧನೆಗಳ ಹೊರತಾಗಿ ಹೊಸ ಚಿಂತನೆ ಹುಟ್ಟುಹಾಕಬಹುದು. ಇದಕ್ಕೆ ಈ ಹಿಂದೆ ಮಾನಸಗಂಗೋತ್ರಿಯೇ ಸಾಕ್ಷಿ ಎಂದು ತಿಳಿಸಿದರು.
ಯಾವ ಕ್ಷೇತ್ರ ಕೆಟ್ಟಿಲ್ಲ ಹೇಳಿ, ರಾಜಕೀಯದೊಂದಿಗೆ, ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಕ್ಷೇತ್ರದಲ್ಲಿ ಹುಳುಕು ಇಲ್ಲವೇ ಎಂದು ಪ್ರಶ್ನಿಸಿದ ಅವರು ಸಾಹಿತಿಗಳು ನಮ್ಮ ದಾಯಾದಿಗಳು (ರಾಜಕಾರಣಿ) ಇದ್ದಹಾಗೆ, ಸಂಬಂಧಿಕರೂ ಇದ್ದಾರೆ. ರಾಜಕಾರಣಿಗಳು ಪದ್ಮಶ್ರೀ ಕೊಡಿಸಿದ್ದೇವೆ, ಭಾರತ ರತ್ನ ಒಂದು ಆಗಿಲ್ಲ ಎಂದು ವ್ಯವಸ್ಥೆಯನ್ನು ಬಣ್ಣಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್‌ಗಾಗಿ ನಡೆಸುವ ಸಂಶೋಧನೆಗಳಿಂದ ಸಮಾಜಕ್ಕೆ ಯಾವುದೇ ಕೊಡುಗೆ ಸಿಗುವುದಿಲ್ಲ. ಹಿಂದೆ ಕುಲಪತಿಗಳು ಬಂದರೆಂದರೆ ಘನತೆ ಗಾಂಭೀರ್ಯ ಇರುತ್ತಿತ್ತು. ಇಂದು ಹುಡುಕಬೇಕಾಗಿದೆ ಎಂದ ಅವರು, ಯಾಂತ್ರಿಕ ಅಕ್ಷರ ಜೋಣೆಯಿಂದ ಏನೂ ಆಗಲ್ಲ ಎಂದರು.
ಚಪ್ಪೋರು ಹೆಚ್ಚಿದ್ದಾರೆ ಎಚ್ಚರ
ವಿಧಾನಸಭೆಯ ಮೊಗಸಾಲೆಯಲ್ಲಿ ಏಮಿ ಭೋಜನಂ ಆಯಿಪಯಿಂದಾ...
ಎಂಬ ತೆಲುಗು ಚಪ್ಪೋರು ಜಾಸ್ತಿ ಆಗಿದ್ದಾರೆ. ಆಡಳಿತ ನಡೆಸುವವರು ಅವರೇ ಆಗಿದ್ದಾರೆ. ಅಲ್ಲಿ ಅಣ್ಣಾ ಕನ್ನಡ ಮಾತನಾಡು ಎಂದು ಹೇಳುವವರು ಬೇಕಾಗಿದ್ದಾರೆ. ಮಾತು ಕೇಳದೇ ಇದ್ದರೆ ಧರಣಿ ಕೂರಬೇಕು. ಕನ್ನಡದಲ್ಲಿ ಮಾತನಾಡುವಂತೆ ಒತ್ತಡ ಹೇರಬೇಕಾಗಿದೆ, ಸಿಡಿದೇಳಬೇಕಾಗಿದೆ. ಇನ್ನು ಸಂಸತ್‌ನಲ್ಲಿ ತಮಿಳುನಾಡಿನ ಸಂಸದರು ಚೊಲ್ಲುತ್ತಾರೆ.
ತಮ್ಮ ಅಭಿಮಾನವನ್ನು ತೋರಿಸುತ್ತಾರೆ ಎಂದು ಆಯನೂರು ಮಂಜುನಾಥ್ ಅವರು ಹೇಳಿದರು.