ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಧ್ಯವರ್ತಿ ಹಾವಳಿ ತಡೆಗಟ್ಟುವ ಕೃಷಿ ನೀತಿ ಅಗತ್ಯ: ಪುಟ್ಟಣ್ಣಯ್ಯ

Lingaraj Badiger
Updated On : 3 Jun 2013, 10:54 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಜೂ.2
ಮಧ್ಯವರ್ತಿಗಳ ಹಾವಳಿ ತಡೆಗಟ್ಟುವಂತಹ ಕೃಷಿ ನೀತಿ ಬೇಕು ಎಂದು ರೈತ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಪ್ರತಿಪಾದಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯುತ್ತಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿತ್ಯುಳ್ಳ ಜ್ಯೋತಿ ಗೋಷ್ಠಿಯಲ್ಲಿ ಅವರು- ಕೃಷಿ ನೀತಿ- ರೈತ, ಗ್ರಾಹಕರ ಆತಂಕ- ವಿಷಯವಾಗಿ ಹಲವು ಅಂಕಿಅಂಶಗಳೊಂದಿಗೆ ಮಾತನಾಡಿದರು. ಕೃಷಿ ಎನ್ನುವುದು ಮಾರುಕಟ್ಟೆ ಇಲ್ಲದ ಉದ್ಯಮ. ಇಲ್ಲಿ ರೈತರಿಗೆ ಸಿಗುವ ಲಾಭಕ್ಕಿಂತ ಮಧ್ಯವರ್ತಿಗಳಿಗೆ ಸಿಗುವ ಲಾಭವೇ ಹೆಚ್ಚು ಎಂದರು.
ಊಟ ಮಾಡುವವರ, ಬೆಳೆಯುವವರ ರಕ್ಷಣೆ ಮಾಡುವುದು ಹಸಿರು ಟವಲ್‌ಗೆ ಗುರಿಯಾಗಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.
ಹಾಹಾಕಾರ ಬರಬಾರದು: ಆಹಾರ ಭದ್ರತೆ ನಾಶ ಆಗಬಾರದು. ರೈತರ ಚಳವಳಿ ಗ್ರಾಹಕರಿಗೆ ಅನ್ಯಾಯ ಮಾಡುವುದಕ್ಕಲ್ಲ. ದೇಶದಲ್ಲಿ ಅನ್ನದ ಹಾಹಾಕಾರ ಬರಬಾರದು ಎಂದು ಹೇಳಿದರು. ಅಂಕಿಅಂಶಗಳ ಮೂಲಕ ರೈತರ ವಸ್ತುಸ್ಥಿತಿಯನ್ನು ವಿವರಿಸಿದ ಅವರು, ಕೃಷಿ ನೀತಿಯ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು. ರೈತರು ಹಾಗೂ ಗ್ರಾಹಕರನ್ನು ಒಳಗೊಂಡಂತಹ ನೀತಿ ಬೇಕು ಎಂದರು. ಸರ್ಕಾರ ರೈತರಿಗೆ ನೀಡುತ್ತಿರುವುದು ಸಾಲ ಅಲ್ಲ. ಅದು ಪ್ರೋತ್ಸಾಹ ಧನ ಎಂದು ಪ್ರತಿಪಾದಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಧರ್ಮ ಮತ್ತು ರಾಜಕಾರಣ ವಿಷಯವಾಗಿ ಮಾತನಾಡಿದ ಚಿಂತಕ ಪ್ರೊ. ಜಿ.ಕೆ. ಗೋವಿಂದರಾವ್, ಉಡುಪಿಯ ಕೃಷ್ಣ ಮಠ ಒಂದು ದೇವಸ್ಥಾನ. ಈ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದರು.
ಸರ್ಕಾರದ ಇಂತಹ ಕ್ರಮವನ್ನು ವಿರೋಧಿಸುವುದು ಜನಪರ ಆಂದೋಲನವಲ್ಲ, ಸ್ವಹಿತಾಸಕ್ತಿಯ ಆಂದೋಲನ ಎಂದರು. ನಂಬಿಕೆ ಎನ್ನುವುದು ಸ್ವಂತ ವಿಷಯ ಅಲ್ಲ. ಅದು ಸಾಮಾಜಿಕ ಬದ್ಧತೆ ಎಂದು ಪ್ರೊ. ಗೋವಿಂದರಾವ್ ಪ್ರತಿಪಾದಿಸಿದರು.
ಬದಲಾಗುತ್ತಿರುವ ಶಾಸಕರು: ಇಂದು ಶೇ.90ರಷ್ಟು ಮಠಗಳು, ಖಾವಿಧಾರಿಗಳು ಜನರಲ್ಲಿ ಆತಂಕವನ್ನೇ ತುಂಬುತ್ತಿದ್ದಾರೆ. ಶಾಸಕರು ಹಳ್ಳಿಯಿಂದ ಬೆಂಗಳೂರಿಗೆ ಬಂದಕೂಡಲೇ ಬದಲಾಗುತ್ತಾರೆ ಎಂದು ಟೀಕಿಸಿದರು.
ಮಾಧ್ಯಮ ಹಾಗೂ ಮೌಢ್ಯತೆ ಬಗ್ಗೆ ಮಾತನಾಡಿದ ಸಾಹಿತಿ ಕುಂ. ವೀರಭದ್ರಪ್ಪ ಅವರು ಇಂದು ಮಾಧ್ಯಮಗಳು ಮೌಢ್ಯತೆಯನ್ನೇ ಹರಡುತ್ತಿವೆ ಎಂದು ಹಲವು ಉದಾಹರಣೆಗಳ ಮೂಲಕ ಪ್ರಸ್ತುತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement