ಮಾಸ್ತರ್ ಸಮುದಾಯದ ಮೇಸ್ಟ್ರು ವಸುದೇವ ಭೂಪಾಲಂ ವೇದಿಕೆ
ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ತುಂಬುವಲ್ಲಿ ಯಶಸ್ವಿಯಾಗಿರುವ ಹುಚ್ಚಪ್ಪ ಮಾಸ್ತರ್ ಅವರು ಒಂದು ಸಮುದಾಯದ ಮೇಸ್ಟ್ರು ಎಂದು ಸಾಹಿತಿ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಬುದುಕು-ಬರಹ ಕುರಿತ ಗೋಷ್ಠಿಯಲ್ಲಿ ಬಹುಮುಖಿ ಬದುಕು ವಿಷಯದ ಕುರಿತು ಮಾತನಾಡಿದರು. ಬುಡಕಟ್ಟು ಜನರು ಹಾಗೂ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಹುಚ್ಚಪ್ಪ ಮಾಸ್ತರ್ ಮಲೆನಾಡಿನ ಅಂಬೇಡ್ಕರ್ ಎಂದ ಅವರು, ಬೇರೆ ಜನಾಂಗದಂತೆ ಬಡುಕಟ್ಟು ವಿದ್ಯಾರ್ಥಿಗಳಿಗೂ ಶಿಕ್ಷಣ ಕೊಡಿಸುವ ಕೆಲಸ ಮಾಡಿದ್ದರು. ಈ ವೇಳೆ ಮೇಲ್ವರ್ಗದ ಜನರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಯಿತು. ಇದೆಲ್ಲದನ್ನು ಮೆಟ್ಟಿನಿಂತು ಬುಡಕಟ್ಟು ಮಕ್ಕಳು ಶಾಲೆ ಮೆಟ್ಟಿಲು ಹತ್ತುವಂತಾಯಿತು ಎಂದರು.
ರಾಷ್ಟ್ರಮಟ್ಟದಲ್ಲಿ ಜನಪದ ಕಲೆ: ಮಾಸ್ತರ್‌ಗೆ ಸ್ವಲ್ಪ ಸಿಟ್ಟು ಹೆಚ್ಚು. ಈ ಕಾರಣದಿಂದಲೇ ಹಲವರೊಂದಿಗೆ ಸಣ್ಣ, ಪುಟ್ಟ ಜಗಳ, ವಾದ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಇದು ಅವರೇ ಒಪ್ಪಿಕೊಳ್ಳುವ ಸತ್ಯ ಎಂದರಲ್ಲದೇ, ಮಾಸ್ತರ್ ಉತ್ತಮ ಸಂಘಟಕ, ರಂಗಭೂಮಿ ಕಲಾವಿದ. ಜಾನಪದ ಕಲೆಯನ್ನು ರಾಷ್ಟ್ರ ಮಟ್ಟದಲ್ಲಿ ತೋರಿಸಿದ ವ್ಯಕ್ತಿತ್ವ ಮಾಸ್ತರ್ ಅವರದ್ದು ಎಂದು ಹೇಳಿದರು.
ಸಮುದಾಯ ಅಧ್ಯಯನಗಳ ಕುರಿತು ಮಾತನಾಡಿದ ಉಪನ್ಯಾಸಕ ದಿನೇಶ್ ಸಿದ್ದಾಪುರ, ಬಡುಕಟ್ಟು ಜನಾಂಗದ ಬಗ್ಗೆ ಅಧ್ಯಯನ ಮಾಡಿರುವ ಹುಚ್ಚಪ್ಪ ಮಾಸ್ತರ್ ಈ ಸಮಾಜದಲ್ಲಿ ಅಡಗಿದ ಧನಿಗೆ ಗುಡುಗಿದ ಧನಿಯಾದರು ಎಂದು ಹೇಳಿದರು.
1960ರಲ್ಲಿ ಹಲಸರಿಗೆ ಭೂಮಿ ನೀಡಿ ಎಂದು ಅರ್ಜಿ 22 ವರ್ಷಗಳ ನಂತರ ಸುಮಾರು 20 ಜನರಿಗೆ ಭೂಮಿ ಕೊಡಿಸಿದ್ದಾರೆ. ಬುಡಕಟ್ಟು ಮಕ್ಕಳ ಶೈಕ್ಷಣಿಕ, ಮಕ್ಕಳಲ್ಲಿ ಆತ್ಯವಿಶ್ವಾಸ ಬೆಳೆಸಿ ಮುಖ್ಯವಾಹಿನಿಗೆ ತಂದರು.
ಜಾನಪದ ಸಾಹಿತ್ಯಕ್ಕೆ ಹೇಗೆ ಅಕ್ಷರ ರೂಪವಿಲ್ಲವೋ ಅದೇ ರೀತಿ ಬುಡಕಟ್ಟು ಸಂಸ್ಕೃತಿಗೂ ಅಕ್ಷರ ರೂಪವಿಲ್ಲ. ಬುಡಕಟ್ಟು ಜನರೊಂದಿಗೆ ಮಾತನಾಡಿದಾಗ ಮಾತ್ರ ಅವರ ಇತಿಹಾಸ ಹಾಗೂ ಸಂಸ್ಕೃತಿ ಪುಂಖಾನುಪುಂಖವಾಗಿ ಹೊರಬರುತ್ತದೆ ಎಂದ ಅವರು, ಅಂಬೇಡ್ಕರ್‌ರಂತೆ ಇವರು ಕೂಡ ಓದುವಾಗ ಇತರೆ ವಿದ್ಯಾರ್ಥಿಗಳಿಂದ ಬೇರೆಯಾಗಿ ಮೂಲೆಯಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಬೇಕಾಯಿತ್ತು. ಅಂದಿನಿಂದಲೇ ವರ್ಣೀಯ ಪದ್ಧತಿ ಬಗ್ಗೆ ಪ್ರಶ್ನೆ ಎತ್ತುತ್ತಾ ಬೆಳೆದಿದ್ದರಿಂದಾಗಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತಂದರು ಎಂದು ಹೇಳಿದರು.
ವಿವಿ ಮಾಡುವ ಕೆಲಸ: ಸಂಗ್ರಹಿತ ಪಠ್ಯಗಳ ಕುರಿತು ಸಾಹಿತಿ ಡಾ.ಹಾ. ಉಮೇಶ್ ಸೊರಬ ಮಾತನಾಡಿ, ತಾವು ತಿಳಿದಿರುವ ವಿಷಯಗಳನ್ನು ಮತ್ತೊಬ್ಬರಿಗೆ ತಿಳಿಸುವ ಉದ್ದೇಶದಿಂದ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಒಂದು ವಿಶ್ವವಿದ್ಯಾನಿಲಯ ಮಾಡುವಂತಹ ಕೆಲಸವನ್ನು ಮಾಸ್ತಾರ್ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇಂದಿನವರು ತಮ್ಮ ಹಿಂದಿರುವ ಸತ್ಯವನ್ನು ಮರೆತಿದ್ದಾರೆ. ಇಂತಹ ಘಟನೆಗಳನ್ನು ಸಂಗ್ರಹಿತ ಪಠ್ಯಗಳ ಮೂಲಕ ನಮಗೆ ನೆನಪಿಸಿಕೊಡುವ ಮೂಲಕ ಹುಚ್ಚಪ್ಪ ಮಾಸ್ತರ್ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಡಾ. ಕೆ. ಪ್ರಭಾಕರ್ ರಾವ್, ಸಮ್ಮೇಳನಾಧ್ಯಕ್ಷ ಹುಚ್ಚಪ್ಪ ಮಾಸ್ತರ್ ಮತ್ತಿತರರು ಇದ್ದರು.