ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು: ಆಸ್ಪತ್ರೆ ಕಿಟಕಿ ಗಾಜು ಪುಡಿ
ಶಿವಮೊಗ್ಗ: ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನೀಡಿದ ಇಂಜಕ್ಷನ್ ಹಸುಗೂಸೊಂದನ್ನು ಬಲಿತೆಗೆದುಕೊಂಡಿದ್ದು, ಸಿಟ್ಟಿಗೆದ್ದ ಪೋಷಕರು ಆಸ್ಪತ್ರೆಯ ಕಿಟಕಿ ಮತ್ತು ಬಾಗಿಲುಗಳ ಗಾಜನ್ನು ಪುಡಿ ಮಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಭಾನುವಾರ ನಡೆದಿದೆ.
ಕಾಶಿಪುರ ವಾಸಿಗಳಾದ ಮಂಜುನಾಥ ಮತ್ತು ಪ್ರಭಾವತಿ ಅವರ 4 ತಿಂಗಳ ಹಸುಗೂಸು ನಿಶ್ಚಿತಾ ಸಾವನಪ್ಪಿದೆ.
ಘಟನೆ ಹಿನ್ನೆಲೆ: ಜ್ವರದಿಂದ ಬಳಲುತ್ತಿದ್ದ ನಿಶ್ಚಿತಾಳನ್ನು ತಂದೆ ಮಂಜುನಾಥ್ ನಗರದ ಬೇರೊಂದು ಆಸ್ಪತ್ರೆಗೆ ಸೇರಿಸಿದ್ದರು. ತಾಯಿ ಪ್ರಭಾವತಿಯೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಶ್ಚಿತಾ ಆರೋಗ್ಯ ಸುಧಾರಿಸದ ಕಾರಣ ಎರಡು ದಿನಗಳ ಹಿಂದಷ್ಟೆ ವೈದ್ಯರ ಸಲಹೆ ಮೇರೆಗೆ ಚಿಲ್ಡರ್ನ್ ಸ್ಪೆಷಲಿಸ್ಟ್ ಎಂದು ಹೇಳಿಕೊಳ್ಳುವ ಇನ್ನೊಂದು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಈ ಎರಡು ದಿನಗಳಲ್ಲಿ ನಿಶ್ಚಿತಾ ಕೊಂಚ ಸುಧಾರಿಸಿಕೊಂಡಿದ್ದಳು.
ತಾಯಿಯ ಮಡಿಲಲ್ಲಿ ಹಾಲು ಕುಡಿಯುತ್ತಿದ್ದ ವೇಳೆ ವಾರ್ಡ್ಗೆ ಬಂದ ನರ್ಸ್ ಒಬ್ಬರು, ಇಂಜೆಕ್ಷನ್ ಕೊಟ್ಟಿದ್ದಾಳೆ. ಪರಿಣಾಮ ಕ್ಷಣದಲ್ಲಿಯೇ ಉಸಿರಾಟದ ತೊಂದರೆಯಿಂದ ನಿಶ್ಚಿತಾ ಸಾವನಪ್ಪಿದ್ದಾಳೆ.
ಘಟನೆ ವಿರೋಧಿಸಿ ಪೋಷಕರು ಆಸ್ಪತ್ರೆಯಲ್ಲಿಯೇ ಪ್ರತಿಭಟನೆ ಮಾಡಿದ್ದು, ಕಿಟಕಿ, ಬಾಗಿಲು ಗಾಜು ಪುಡಿ ಮಾಡಿದ್ದಾರೆ. ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಜಯನಗರ ಠಾಣೆಯಲ್ಲಿ ದೂರು ದಾಖಲು ಮಾಡಿದೆ.