ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರ ಭೂ ಬ್ಯಾಂಕ್ ಹಿಂಪಡೆಯಬೇಕಿದೆ: ದೇವನೂರು

Lingaraj Badiger
Updated On : 3 Jun 2013, 11:01 am

ಕಪ್ರ ವಾರ್ತೆ, ಶಿವಮೊಗ್ಗ, ಜೂ.2
ಪ್ರಸ್ತುತ ಇರುವ ಸರ್ಕಾರವಾದರೂ ಭೂ ಬ್ಯಾಂಕ್‌ನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಇಡೀ ಜನತೆ ತಮ್ಮ ಉಳುವಿಗಾಗಿ ಭೂಮಿಯನ್ನು ಕಾಪಾಡಿಕೊಳ್ಳಲು ಮತ್ತೊಮ್ಮೆ ಹೋರಾಟ ನಡೆಸಬೇಕಿದೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.
 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಸ್ವಾತಂತ್ರ್ಯ ನಂತರದಿಂದ ಕಳೆದ 5 ವರ್ಷದ ಹಿಂದಿನವರೆಗೆ ಸರ್ಕಾರ ಸುಮಾರು 60 ಸಾವಿರ ಎಕರೆ ಭೂಮಿಯನ್ನು ಭೂಬ್ಯಾಂಕ್ ಯೋಜನೆಗೆ ಒಳಪಡಿಸಿತ್ತು. ಆದರೆ, ಹಿಂದೆ ಆಡಳಿತ ಮಾಡಿದ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ 1 ಲಕ್ಷ ಎಕರೆ ವಶ ಪಡಿಸಿಕೊಂಡಿದ್ದು, ಇದು ಅಭಿವೃದ್ಧಿ ದೃಷ್ಟಿಯಿಂದಾದರೂ ಇದರ ಒಳಮರ್ಮ ಬೇರೆನೇ ಇದೆ ಎಂದು ದೂರಿದರು.
ಹೊರ ರಾಜ್ಯದಲ್ಲಿ ಈ ಸ್ಥಿತಿ ಇಲ್ಲ: ಮೊದಲು ಕೈಗಾರಿಕೆಗಾಗಿ ಸರ್ಕಾರ ವಶಪಡಿಸಿಕೊಂಡು ಗುತ್ತಿಗೆ ಆಧಾರದ ಮೇಲೆ ಕೆಲವರಿಗೆ ನೀಡುತ್ತಿತ್ತು. ಆದರೆ, ಇದೀಗ ಕೆಎಐಡಿಬಿ ಕಾನೂನಿಗೆ ತಿದ್ದುಪಡಿತಂದು ಗುತ್ತಿಗೆ ನೀಡಿದ ಭೂಮಿಯನ್ನು ಖರೀದಿ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಮುಂದಾಗಿದೆ. ಬೇರೆ ಯಾವ ರಾಜ್ಯದಲ್ಲಿಯೂ ಈ ಸ್ಥಿತಿಯಿಲ್ಲ. ಉದ್ದೇಶ ತಪ್ಪಿದರೆ ಭೂಮಿಯನ್ನು ಪುನಾ ವಶಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ, ಇಲ್ಲಿ ಎಲ್ಲವು ಕ್ರಯ ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ಕೇಳುವ ಮನೋಭಾವನೆ ಯಾರಿಗೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕರು ಇರುವುದು ಕೇವಲ ಒಬ್ಬರು ಮಾತ್ರ. ಉಳಿದವರೆಲ್ಲರೂ ಆಡಳಿತ ಪಕ್ಷದವರೇ ಆಗಿದ್ದಾರೆ. ಡಬ್ಲ್ಯೂಟಿಓ, ಗ್ಯಾಟ್‌ನ್ನು ವಿರೋಧಿಸವ ಧೈರ್ಯ ಅವರಿಗಿಲ್ಲ. ಏಕೆಂದರೆ ಇಂದು ಅವುಗಳೇ ದೇಶವನ್ನು ಆಡಳಿತ ಮಾಡುತ್ತಿದ್ದು, ನಮಗೆ ಸ್ವಾತಂತ್ರ್ಯ ಇಲ್ಲದಾಗಿದೆ. ಆದರಿಂದಲೇ ದೇಶದ ಪ್ರಧಾನಿಯ ಕಾಲಿಗೆ ಸರಪಳಿಯಿಂದ ಬಂಧಿಸಲಾಗಿದೆ. ಇಂತಹ ಸರಪಳಿಯನ್ನು ಮೊದಲು ಕಿತ್ತು ಹಾಕಬೇಕಿದೆ ಎಂದರು.
ಮಕ್ಕಳಂತೆ ಮಾರಿಕೊಂಡ ಹಾಗೆ: ರಾಜ್ಯದ ಚಾಮರಾಜಪೇಟೆಯ ಪಾಂಡವಪುರ ಎಂಬಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಆದರೆ, ಯಾರು ಹೋರಾಟ ಮಾಡುತ್ತಿಲ್ಲ. ರೈತರು ಭೂಮಿ ಬಿಟ್ಟುಕೊಡುವ ಮುನ್ನ ಮಣ್ಣನ್ನು ಬಗೆದು ಮಾರಿಕೊಳ್ಳುತ್ತಿದ್ದಾರೆ. ಒಬ್ಬ ರೈತ ಮಣ್ಣನ್ನು ಬಗೆದು ಮಾರಿದರೆ, ಬರಗಾಲದಲ್ಲಿ ತನ್ನ ಮಕ್ಕಳನ್ನು ಮಾರಿ ಜೀವನ ಮಾಡಿದಂತೆ. ಈ ಸ್ಥಿತಿಗೆ ಆತನನ್ನು ದೂಡಿದ್ದು ಭೂ ಮಾಫಿಯ. ಇದು ಭೂಮಿ ಕಳೆದುಕೊಂಡವನ ಹತ್ಯೆ ಮಾತ್ರ ಅಲ್ಲ ಸಂತತಿ ಹತ್ಯೆಯಾದಂತೆ ಎಂದು ತಿಳಿಸಿದರು.
ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ವಿದೇಶಗಳಿಗೆ ಜಮೀನು ನೀಡುವ ಸರ್ಕಾರ ರೈತರ ಬಗ್ಗೆ ಚಿಂತಿಸುತ್ತಿಲ್ಲ. ಈ ನಡುವೆ ಚಳವಳಿಗಳು ಕೂಡ ಒಂದಾಗದಿರುವುದಕ್ಕೆ ಇಚ್ಚಾಶಕ್ತಿ ಕೊರತೆ ಕೂಡ ಇದೆ ಎಂದು ಬೇಸರವ್ಯಕ್ತಪಡಿಸಿದರು.
ಶ್ರಮಿಕ ವರ್ಗದ ಸಾಮರ್ಥ್ಯ ತೋರಿಸಿ: ಕೈಗಾರಿಕೆಗಳಂತೆ ಕೃಷಿಯನ್ನೂ ರಕ್ಷಿಸಲು ಸರ್ಕಾರ ಮುಂದೆ ಬರಬೇಕು. ತಂಪು ಪಾನೀಯ ಕಂಪನಿಗಳಿಗೆ ಸಬ್ಸಿಡಿ ದರದಲ್ಲಿ ಸಕ್ಕರೆ ಕೊಡುವ ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಸಕ್ಕರೆ ವಿತರಿಸಲು ಏಕೆ ಮುಂದಾಗುತ್ತಿಲ್ಲ. ಹಾಗಾಗಿ ದುಡಿಯುವ ವರ್ಗ ಒಟ್ಟಾಗಿ ಶ್ರಮಿಕ ವರ್ಗದ ಸಾಮರ್ಥ್ಯ ತೋರಿಸಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಶೇ.40 ರಿಂದ 45ರಷ್ಟು ಜನರ ಬಳಿ ಕಪ್ಪುಹಣ ಇದೆ. ಹಾಗಾಗಿ ನೂತನ ರಾಜ್ಯ ಸರ್ಕಾರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾನೂನು ಜಾರಿಗೆ ತರಬೇಕು. ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕೂ ಮುನ್ನಾ ಅಡಕೆ ಬೆಳೆಗಾರರ ರಕ್ಷಣೆ ಮಾಡುವ ನೀತಿ ಜಾರಿಗೆ ತರಬೇಕಿತ್ತು ಎಂದರು.
ಇದೇ ವೇಳೆ ಶಾಸಕ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಜಿ. ಉಮಾಪತಿಯಪ್ಪ, ಸಾಹಿತಿ ಪ್ರೊ. ನಟರಾಜ್ ಹುಳಿಯಾರ್, ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಎಂ. ಗುರುಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement