ಅಧಿವೇಶನ ನಂತರ ರಾಜ್ಯಾದ್ಯಂತ ಪ್ರವಾಸ: ಬಿಎಸ್ವೈ
ಶಿವಮೊಗ್ಗ: ವಿಧಾನಸಭೆ ಅಧಿವೇಶನ ಮುಗಿದ ನಂತರ ಪಕ್ಷ ಬಲಪಡಿಸಲು ಎರಡು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸುವುದಾಗಿ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ.7-8ರಂದು ಪಕ್ಷದ ಪ್ರಮುಖರ ಸಭೆ ನಡೆಸಿ ಪ್ರವಾಸದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಪಕ್ಷವನ್ನು ಬಲಪಡಿಸುವುದು ಪ್ರವಾಸದ ಉದ್ದೇಶ ಎಂದ ಅವರು, ಜಿಲ್ಲಾ ಮಟ್ಟದಲ್ಲಿಯೂ ಸೂಕ್ತ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.
ನಾಳೆ ವಿಶ್ವ ಪರಿಸರ ದಿನಾಚರಣೆ
ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷತಾ ಕೇಂದ್ರ, ಜೆಎನ್ಎನ್ಸಿಇ ಶಿವಮೊಗ್ಗ ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಂದು ಬೆಳಗ್ಗೆ 10ಗಂಟೆಗೆ ಬಿ.ಎಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವಿಪುಲ್ಬನ್ಸಲ್ ಉದ್ಘಾಟಿಸುವರು ಹಾಗೂ ಪರಿಸರ ಶಾಲಾಮಿತ್ರ ಕೈಪಿಡಿ ಬಿಡುಗಡೆಗೊಂಡಿರುವರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ರಮೇಶ್ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಸ್. ಕುಮಾರ್, ಕಿಡ್ಸ್ ಮತ್ತು
ಜ್ಞಾನಸಾಗರ ನಾವೆ ಟ್ರಸ್ಟ್ನ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್ ಅತಿಥಿಯಾಗಿ ಆಗಮಿಸಲಿರುವರು. ಮುಖ್ಯ ಭಾಷಣಕಾರರಾಗಿ ಜೆ.ಎನ್.ಎನ್.ಸಿ.ಇ. ಕಾಲೇಜಿನ ಪ್ರೊ. ಡಾ.ಎಲ್.ಕೆ. ಶ್ರೀಪತಿ ಆಗಮಿಸಲಿರುವರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವೈ.ಎಸ್. ಹರಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್ ಹಾಗೂ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್. ಜನಾರ್ದನ್ ಉಪಸ್ಥಿತರಿರುವರು.