ಗುಟ್ಕಾ ನಿಷೇಧ ಮುಂದೂಡಲು ಒತ್ತಾಯ
ಕ.ಪ್ರ. ವಾರ್ತೆ ಶಿವಮೊಗ್ಗ ಜೂ. 3
ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದ ನಂತರ ನಡೆಯುತ್ತಿರುವ ಹೋರಾಟ ಮುಂದುವರಿದಿದ್ದು, ಸೋಮವಾರ ಬಿಜೆಪಿಯು ಅಡಕೆ ಬೆಳೆಗಾರರ ಪರ ದನಿ ಎತ್ತಿತು.
ಏಕಾಏಕಿ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ರೈತನ ಬದುಕಿನ ಬಗ್ಗೆ, ಅಡಕೆಯ ಪರ್ಯಾಯ ಉಪಯೋಗದ ಬಗ್ಗೆ ಚಿಂತಿಸಿ ಕ್ರಮಕೈಗೊಂಡು ನಂತರ ನಿಷೇಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.
ಅಸಮಾಧಾನ: ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದೇ ಏಕಾಏಕಿ ಗುಟ್ಕಾ ಪಾನ್ ಮಸಾಲ ನಿಷೇಧಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಅಡಕೆ ವಾಣಿಜ್ಯ ಬೆಳೆಯಾಗಿದ್ದು, ಸಾಂಪ್ರದಾಯಿಕ ಬೆಳೆಯೂ ಆಗಿದೆ. ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಅಡಕೆ ಬೆಳೆಯುತ್ತಿದ್ದು, ಶಿವಮೊಗ್ಗ ಪ್ರಮುಖ ಸ್ಥಾನದಲ್ಲಿದೆ. ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧದಿಂದ ರಾಜ್ಯದ 60 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಬೀದಿಪಾಲಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಿಯಾದ ಕ್ರಮವಲ್ಲ: ರೈತರ ಮತ್ತು ಕೃಷಿ ಕಾರ್ಮಿಕರ ಹಿತದೃಷ್ಟಿಯಿಂದ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ ಮುಂದೂಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗಾಲಾಗಿದ್ದು ಇಂತಹ ಸಂದರ್ಭದಲ್ಲಿ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಸರಿಯಲ್ಲ. ಗುಟ್ಕಾ ಪಾನ್ ಮಸಾಲ ತಯಾರಿಸುವಾಗ ರಾಸಾಯನಿಕ ವಸ್ತುಗಳನ್ನು ಬಳಸುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದೆ ಗುಟ್ಕಾ ನಿಷೇಧ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಅಡಕೆ ಕೊಳೆ ರೋಗ ಮತ್ತು ಹಳದಿ ರೋಗ ಬಂದ ಸಂದರ್ಭದಲ್ಲಿ ರೈತರಿಗೆ ಆಗುವ ನಷ್ಟವನ್ನು ಸರ್ಕಾರವೇ ಸಂಪೂರ್ಣ ಭರಿಸಬೇಕು. ಗೋರಕ್ ಸಿಂಗ್ ವರದಿಯನ್ನು ತಕ್ಷಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸಾಲ ಸಂಪೂರ್ಣ ಮನ್ನಾ ಮಾಡಿ: ಈ ಹಿಂದಿನ ಸರ್ಕಾರ ಮಾಡಿರುವ 25 ಸಾವಿರ ಸಾಲಮನ್ನಾ ಹಣ ತಕ್ಷಣ ಬಿಡುಗಡೆ ಮಾಡಬೇಕು. ಹೊಸ ಸಾಲವನ್ನು ರೈತರಿಗೆ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಹೊರ ರಾಷ್ಟ್ರಗಳಿಂದ ಆಮದಾಗುತ್ತಿರುವ ಅಡಕೆಯನ್ನು ಸಂಪೂರ್ಣ ನಿಷೇಧಿಸಬೇಕು, ಅಡಕೆಗೆ ಪರ್ಯಾಯ ಬಳಕೆಗೆ ಹೊಸ ಸಂಶೋಧನೆ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಎಂ.ಎಸ್. ಮಹೇಂದ್ರನಾಥ್, ಎ.ಎನ್. ನಟರಾಜ್, ಸಿ. ಹೊನ್ನಪ್ಪ, ನಂಜುಂಡಪ್ಪ, ಬಾಳೋಜಿರಾವ್, ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಅಣ್ಣಪ್ಪ ಮೊದಲಾದವರಿದ್ದರು.