ಗುಟ್ಕಾ ನಿಷೇಧ ಮುಂದೂಡಲು ಒತ್ತಾಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.3
ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದ ನಂತರ ನಡೆಯುತ್ತಿರುವ ಹೋರಾಟ ಮುಂದುವರಿದಿದ್ದು, ಸೋಮವಾರ ಬಿಜೆಪಿಯು ಅಡಕೆ ಬೆಳೆಗಾರರ ಪರ ದನಿ ಎತ್ತಿತು.
ಏಕಾಏಕಿ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ರೈತನ ಬದುಕಿನ ಬಗ್ಗೆ, ಅಡಕೆಯ ಪರ್ಯಾಯ ಉಪಯೋಗದ ಬಗ್ಗೆ ಚಿಂತಿಸಿ ಕ್ರಮಕೈಗೊಂಡು ನಂತರ ನಿಷೇಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.
ಅಸಮಾಧಾನ: ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದೇ ಏಕಾಏಕಿ ಗುಟ್ಕಾ ಪಾನ್ ಮಸಾಲ ನಿಷೇಧಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಅಡಕೆ ವಾಣಿಜ್ಯ ಬೆಳೆಯಾಗಿದ್ದು, ಸಾಂಪ್ರದಾಯಿಕ ಬೆಳೆಯೂ ಆಗಿದೆ. ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಅಡಕೆ ಬೆಳೆಯುತ್ತಿದ್ದು, ಶಿವಮೊಗ್ಗ ಪ್ರಮುಖ ಸ್ಥಾನದಲ್ಲಿದೆ. ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧದಿಂದ ರಾಜ್ಯದ 60 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳು ಬೀದಿಪಾಲಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರಿಯಾದ ಕ್ರಮವಲ್ಲ: ರೈತರ ಮತ್ತು ಕೃಷಿ ಕಾರ್ಮಿಕರ ಹಿತದೃಷ್ಟಿಯಿಂದ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ ಮುಂದೂಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗಾಲಾಗಿದ್ದು ಇಂತಹ ಸಂದರ್ಭದಲ್ಲಿ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಸರಿಯಲ್ಲ.ಗುಟ್ಕಾ ಪಾನ್ ಮಸಾಲ ತಯಾರಿಸುವಾಗ ರಾಸಾಯನಿಕ ವಸ್ತುಗಳನ್ನು ಬಳಸುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದೆ ಗುಟ್ಕಾ ನಿಷೇಧ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಅಡಕೆ ಕೊಳೆ ರೋಗ ಮತ್ತು ಹಳದಿ ರೋಗ ಬಂದ ಸಂದರ್ಭದಲ್ಲಿ ರೈತರಿಗೆ ಆಗುವ ನಷ್ಟವನ್ನು ಸರ್ಕಾರವೇ ಸಂಪೂರ್ಣ ಭರಿಸಬೇಕು. ಗೋರಕ್ ಸಿಂಗ್ ವರದಿಯನ್ನು ತಕ್ಷಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸಾಲ ಸಂಪೂರ್ಣ ಮನ್ನಾ ಮಾಡಿ: ಈ ಹಿಂದಿನ ಸರ್ಕಾರ ಮಾಡಿರುವ 25 ಸಾವಿರ ಸಾಲಮನ್ನಾ ಹಣ ತಕ್ಷಣ ಬಿಡುಗಡೆ ಮಾಡಬೇಕು. ಹೊಸ ಸಾಲವನ್ನು ರೈತರಿಗೆ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಹೊರ ರಾಷ್ಟ್ರಗಳಿಂದ ಆಮದಾಗುತ್ತಿರುವ ಅಡಕೆಯನ್ನು ಸಂಪೂರ್ಣ ನಿಷೇಧಿಸಬೇಕು, ಅಡಕೆಗೆ ಪರ್ಯಾಯ ಬಳಕೆಗೆ ಹೊಸ ಸಂಶೋಧನೆ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಮಹೇಂದ್ರನಾಥ್, ಎ.ಎನ್. ನಟರಾಜ್, ಸಿ. ಹೊನ್ನಪ್ಪ, ನಂಜುಂಡಪ್ಪ, ಬಾಳೋಜಿರಾವ್, ಎಸ್.ಎನ್. ಚನ್ನಬಸಪ್ಪ, ಜ್ಞಾನೇಶ್ವರ್, ಅಣ್ಣಪ್ಪ ಇದ್ದರು.
ಗುಟ್ಕಾ ನಿಷೇಧ ಆತುರದ ನಿರ್ಧಾರ
ಸಾಗರ: ಗುಟ್ಕಾ ನಿಷೇದ ರಾಜ್ಯ ಸರ್ಕಾರದ ತರಾತುರಿಯ ನಿರ್ಧಾರವಾಗಿದ್ದು ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಈ ಬಗ್ಗೆ ಪುನರ್ ಪರಿಶೀಲನೆ ಮಾಡುವುದು ಸೂಕ್ತ ಎಂದು ಮಾಜಿ ಸಚಿವ ಹೆಚ್. ಹಾಲಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಟ್ಕಾ ನಿಷೇಧದಂತಹ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸದನದಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಬೇಕಿತ್ತು. ಹಾಗೆ ಮಾಡದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಒಳ್ಳೆಯ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದರು. ಕೆ.ಜಿ.ಗೆ 1 ದರದಲ್ಲಿ 30 ಕೆ.ಜಿ. ಅಕ್ಕಿ ವಿತರಣೆ ಪ್ರಾಯೋಗಿಕವಾಗಿ ಸಾಧ್ಯವಾಗದ ಮಾತು. ಪೂರ್ವ ತಯಾರಿ ಮಾಡಿಕೊಳ್ಳದೆ 1ಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದರು. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪನವರು ಮಂತ್ರಿಯೇ ಆಗಬೇಕಿತ್ತು. ಈಗ ಸ್ಪೀಕರ್ಸ್ಥಾನಕ್ಕೆ ಸೀಮಿತಗೊಳಿಸಿದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ ಎಂದು ಹೇಳಿದರು.
ಅಭಿನಂದಿಸುತ್ತೇನೆ: ಕಾಗೋಡು ಸಭಾಧ್ಯಕ್ಷರಾಗಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದ ಹಾಲಪ್ಪ, ಹಿಂದೆ ಸ್ಪೀಕರ್ ಆಗಿ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್ ಅಂಥವರ ಉದಾಹರಣೆ ನಮ್ಮ ಮುಂದಿದೆ. ಕಾಗೋಡು ತಿಮ್ಮಪ್ಪನವರಿಗೂ ಮುಂದೆ ಇಂತಹ ಅವಕಾಶ ದೊರೆಯುವಂತಾಗಲಿ ಎಂದು ಆಶಿಸಿದರು. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಸೋತವರಿಗೆ ಇನ್ನೂ ಸೂತಕ ಮುಗಿದಿಲ್ಲ, ಗೆದ್ದವರಿಗೆ ಶಾಸ್ತ್ರ ಮುಗಿದಿಲ್ಲ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಸೋಲು, ಗೆಲುವು ಸಹಜ ಎಂದರು. ವಿನಾಯಕರಾವ್, ಮಂಜಪ್ಪ, ಮಂಜುನಾಥರಾವ್, ರವಿ ಹಾಜರಿದ್ದರು.