ಜಾರಿಯಾಗದ ಜೀತಮುಕ್ತ ಕಾಯ್ದೆ: ಉಮೇಶ್ ವಿಷಾದ
ಸೊರಬ: ಜೀತಮುಕ್ತ ಕಾಯ್ದೆ ಅನುಷ್ಠಾನಗೊಂಡು 3 ದಶಕ ಕಳೆದರೂ ಫಲಪ್ರಧವಾಗಿ ಜಾರಿಯಾಗದಿರುವುದು ನೋವಿನ ಸಂಗತಿ ಎಂದು ರಾಜ್ಯ ಜೈವಿಕ ಸಂಚಾಲಕ ಬಿ. ಉಮೇಶ್ ನೂರಲಕಪ್ಪೆ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಜೀತ ಪದ್ಧತಿ ಕಾಯ್ದೆ 1993ರಲ್ಲಿ ತಿದ್ದುಪಡಿ ಆಗಿದ್ದು, ಅದರ ಪ್ರಕಾರ ವಾರ್ಡ್ ಅಥವಾ ಗ್ರಾಪಂ ವ್ಯಾಪ್ತಿಯಲ್ಲಿ ಜೀತದಾಳುಗಳು ಇದ್ದರೆ, ಅಂತಲ್ಲಿ ಸದಸ್ಯರ ಅನರ್ಹತೆ ಗುರುತಿಸಿ, ಗ್ರಾಮ ಪಂಚಾಯ್ತಿಯನ್ನು ರದ್ದುಗೊಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು, ಸಂಘ,ಸಂಸ್ಥೆಗಳವರು ಕಾಯ್ದೆ ಕುರಿತು ಅರಿವು ನೀಡುವ ಮೂಲಕ ಜೀತಪದ್ಧತಿಯಂತ ಅನಿಷ್ಟವನ್ನು ತೆಗೆಯಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಗಾರದಲ್ಲಿದ್ದ ತಹಸೀಲ್ದಾರ್ ತೇಜಸ್ ಕುಮಾರ್ ಮಾತನಾಡಿ, ಮಾನವನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿರುವ ಜೀತ ಪದ್ಧತಿಯನ್ನು ತೊಡೆದು ಹಾಕಲು ಸಾರ್ವಜನಿಕರ ಸಹಕರ ಅಗತ್ಯ, ಇಂತಹ ಪದ್ಧತಿ ಕಂಡುಬಂದಲ್ಲಿ ದೂರು ನೀಡಿದರೆ ಅಂತವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.ಜಿಲ್ಲಾ ಸಂಚಾಲಕ ರಂಗಸ್ವಾಮಿ ಕಾಯ್ದೆ ಕುರಿತಂತೆ ಸುದೀರ್ಘ ಮಾಹಿತಿ ನೀಡಿದರು. ಜಿಲ್ಲಾ ಸಂಯೋಜಕ ಗಂಗ ಹನುಮಯ್ಯ ಜೀತ ವಿಮುಕ್ತಿ ಕುರಿತು ಲಾವಣಿ ಹಾಡಿದರು.ತಾಪಂ ಅಧ್ಯಕ್ಷ ಸದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು. ಇಒ ಪುಷ್ಪಾ ಎಂ. ಕಮ್ಮಾರ್ ಮೊದಲಾದವರು ಹಾಜರಿದ್ದರು.