ರಸ್ತೆ ಮಧ್ಯ ಗುಂಡಿ: ಪಟ್ಟಣ ಪಂಚಾಯತ್ ನಿರ್ಲಕ್ಷ್ಯ
ಕ.ಪ್ರ.ವಾರ್ತೆ, ಸೊರಬ, ಜೂ.3
ತಾಲೂಕಿನ ಕೆಲವೆಡೆ ಡೆಂಘೀ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಜನತೆಗೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರಿಕೆ ನೀಡಲಾಗುತ್ತಿದೆ.
ಇಲಾಖೆಯೊಂದಿಗೆ ಪಟ್ಟಣ ಪಂಚಾಯ್ತಿ ಸಹಾ ಕೈ ಜೋಡಿಸಿ ಎಚ್ಚರ ನೀಡುವಲ್ಲಿ ಮುಂದಾಗಿರುವುದು ಸ್ವಾಗತಾರ್ಹವೇನೋ ಹೌದು. ಆದರೆ, ಪಪಂ ತನ್ನ ಕೊಳಕು ಗಮನಿಸುವುದು ಬಿಟ್ಟು ನಿಮ್ಮ ಊರು, ಮನೆ, ಸುತ್ತ ಮುತ್ತ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕೆಲ ವರ್ತಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯ ದೊಡ್ಡ ಗುಂಡಿಯಲ್ಲಿ ಕೊಳೆತ ತ್ಯಾಜ್ಯಗಳೊಂದಿಗಿನ ನೀರು ಮಡುಗಟ್ಟಿದೆ, ಸುತ್ತೆಲ್ಲ ಸುಮಾರು 200 ಮೀ.ವ್ಯಾಪ್ತಿ ದುರ್ನಾತ ಬೀರುತ್ತಿರುವ ಈ ಗುಂಡಿಯಲ್ಲಿ ಈಗಾಗಲೆ ರಾತ್ರಿ ವೇಳೆ ಗಮನಿಸದೆ ಬಿದ್ದು ಗಾಯಗೊಂಡ ನಿದರ್ಶನವೂ ಇದೆ.ಈ ದುರ್ನಾತದಿಂದಾಗಿ ಕಾಂಪ್ಲೆಕ್ಸ್ನಲ್ಲಿನ ಅಂಗಡಿಗಳಿಗೆ ಬರುವ ಗಿರಾಕಿಗಳೂ ಕಡಿಮೆಯಾಗಿದ್ದಾರೆ ಎಂದು ವ್ಯಾಪಾರಸ್ಥರು, ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
--
ಡಿ.ಎಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಪ್ರಿಯದರ್ಶಿನಿ ಶಿಕ್ಷಕ ತರಬೇತಿ ಕೇಂದ್ರದಲ್ಲಿ 2013-14ನೇ ಸಾಲಿಗೆ ಎರಡು ವರ್ಷ ಅವಧಿಯ ಡಿ.ಎಡ್. ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ದ್ವಿತೀಯ ಪಿಯುಸಿ ಉತ್ತೀರ್ಣರಾದ ಎಸ್ಸಿಎಸ್ಟಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣದ ಜೊತೆಗೆ ಜೊತೆಗೆ ಸಮವಸ್ತ್ರ, ಪಠ್ಯಪುಸ್ತಕ, ಶೈಕ್ಷಣಿಕ ಪ್ರವಾಸ ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಗ್ಲೋಬಲ್ ಎಜುಕೇಷನ್ ಸೊಸೈಟಿ ತಿಳಿಸಿದೆ. ಬೇರೆ ತಾಲೂಕಿನಿಂದ ಬರುವ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಮಾಹಿತಿಗೆ ಮೊ.ಸಂ.9448123344 ಸಂಪರ್ಕಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್ ತಿಳಿಸಿದ್ದಾರೆ.