ಸಿಇಟಿ ಸಹಾಯವಾಣಿ ಕೇಂದ್ರ ಸಜ್ಜು
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.3
ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪ, ಕೃಷಿ ಸಂಬಂಧಿ ಪದವಿಕೋರ್ಸ್ಗಳ ಪ್ರವೇಶಕ್ಕಾಗಿ ಸಿಇಟಿ ಬರೆದಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಜೂ.5ರಿಂದ ಆರಂಭವಾಲಿದ್ದು, ನಗರದ ಜವಾಹರಲಾರ್ ನೆಹರೂ ರಾಷ್ಟ್ರೀಯ ತಾಂತ್ರಿಕ ಕಾಲೇಜಿನಲ್ಲಿ ಸಿಇಟಿ ಸಹಾಯವಾಣಿ ಕೇಂದ್ರ ಸಜ್ಜಾಗಿದೆ.
ಕೇಂದ್ರದ ಮುಖ್ಯ ನೋಡಲ್ ಅಧಿಕಾರಿ ಡಾ. ನಾಗಮಣಿ ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರಕ್ಕೆ ದಾಖಲೆ ಪರಿಶೀಲನೆಗೆ ಆಗಮಿಸುವ ಅಭ್ಯರ್ಥಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಇದುವರೆಗಿನ ಸೂಚನೆಯಂತೆ ಈ ಬಾರಿ ಒಂದೇ ಸುತ್ತಿನ ಕಾಲೇಜು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ವಿದ್ಯಾರ್ಥಿಗಳು ಗರಿಷ್ಠ ಕಾಲೇಜುಗಳನ್ನು ಆನ್ಲೈನ್ ಆಯ್ಕೆ ಸಂದರ್ಭದಲ್ಲಿ ನಮೂದಿಸುವುದು ಸೂಕ್ತ. ಕೆಲವೇ ಕಾಲೇಜುಗಳಲ್ಲಿ ಸೀಟುಗಳು ಭರ್ತಿಯಾದರೆ ಅಂತಹ ಅಭ್ಯರ್ಥಿಗಳು ಆಯ್ಕೆ ಸುತ್ತಿನಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ ಎಂದರು.
6 ಕೌಂಟರ್ ನಿಗದಿ: ದಾಖಲೆಗಳ ಪರಿಶೀಲನೆ ನಂತರ ವಿದ್ಯಾರ್ಥಿಗೆ ರಹಸ್ಯ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಅವರು ಕಾಲೇಜುಗಳ ಆಯ್ಕೆ ಮಾಡಬೇಕು. ಈ ಸಂಖ್ಯೆ ಬೇರೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಯ್ದಿರಿಸಿಕೊಳ್ಳುವಂತೆ ಸೂಚಿಸಿದರು.ಈ ಸಹಾಯವಾಣಿ ಕೇಂದ್ರದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಪ್ರತ್ಯೇಕವಾದ 6 ಕೌಂಟರ್ಗಳನ್ನು ಆರಂಭಿಸಲಾಗುವುದು. ಜೂ.5ರಂದು ಬೆಳಗ್ಗೆ 9 ಗಂಟೆಗೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಬಸ್ ವ್ಯವಸ್ಥೆ: ಜೆಎನ್ಎನ್ಸಿಇ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರಾವ್ ಕುಂಟೆ, ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಕಾಲೇಜಿನ ವತಿಯಿಂದ ಅಗತ್ಯ ಸ್ಥಳಾವಕಾಶ, 4 ಗಣಕಯಂತ್ರಗಳು ಹಾಗೂ ಮಾನವ ಸಂಪನ್ಮೂಲದ ನೆರವು ಒದಗಿಸಲಾಗುವುದು.
ಅಲ್ಲದೇ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನಗರದ ಮಹಾವೀರ ವೃತ್ತದಿಂದ ಬಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಾಗರಾಜ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಸಹಾಯವಾಣಿ ಕೇಂದ್ರದ ಹೆಚ್ಚುವರಿ ನೋಡಲ್ ಅಧಿಕಾರಿ ನಾಗರಾಜ್ ಉಪಪಸ್ಥಿತರಿದ್ದರು.
ಯಾವ ಕಾರಣಕ್ಕೂ ಮರೆಯಬೇಡಿ
ನೀವು ಸಲ್ಲಿಸುವ ಮೂಲ ದಾಖಲಾತಿಗಳ ಜತೆಗೆ ಪತ್ರಾಂಕಿತ (ಗೆಜೆಟೆಡ್) ಅಧಿಕಾರಿಯ ಸಹಿ ಹೊಂದಿರುವ ಎರಡು ನಕಲು ಪ್ರತಿಗಳನ್ನು ತರುವುದು ಕಡ್ಡಾಯ. ಅನುದಾನಿತ ಅಥವಾ ಅನುದಾನರಹಿತ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಪ್ರೊಫೆಸರ್ಗಳಿಂದ ದೃಢೀಕರಿಸುವುದು ಬೇಡ. ಸಿಇಟಿ ಸಹಾಯವಾಣಿ ಕೇಂದ್ರವಿರುವ ಜೆಎನ್ಎನ್ಸಿಇ ಕಾಲೇಜಿನ ಪ್ರಾಂಶುಪಾಲರು, ಪ್ರೊಫೆಸರ್ಗಳೂ ಸಹ ದೃಢೀಕರಿಸುವಂತಿಲ್ಲ. ಆದ್ದರಿಂದ ಇಲ್ಲಿಗೆ ಬರುವ ಮುನ್ನವೇ ಪತ್ರಾಂಕಿತ ಸರ್ಕಾರಿ ಅಧಿಕಾರಿಯಿಂದ ದೃಢೀಕರಿಸಿಕೊಂಡು ತನ್ನಿ.
ಓಎಂಆರ್ ಶೀಟ್ನಲ್ಲಿ ನಮೂದಿಸಿದ ಎಲ್ಲಾ ದಾಖಲೆಗಳ ಮೂಲಪ್ರತಿ ತರಬೇಕು. ಮೀಸಲಾತಿಗೆ ಸಂಬಂಧಿಸಿದ ಜಾತಿ, ಆದಾಯ, ವಿದ್ಯಾಭ್ಯಾಸ ಇತ್ಯಾದಿ ದಾಖಲೆಗಳನ್ನು ತರದಿದ್ದರೆ ನಿಮ್ಮನ್ನು ಸಾಮಾನ್ಯ ವಿಭಾಗಕ್ಕೆ ಪರಿಗಣಿಸಲಾಗುವುದು.
ಪ್ರತಿದಿನ ನಾಲ್ಕು ಅವಧಿಯಲ್ಲಿ ದಾಖಲೆ ಪರಿಶೀಲನೆ ನಡೆಯಲಿದ್ದು, ಒಂದು ಗಂಟೆ ಮುಂಚೆ ಸಹಾಯವಾಣಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ.
ನಿಮ್ಮ ಬಳಿ ಇರುವ ಸಿಇಟಿ ಸಂಬಧಿಸಿದ ಕಿರುಹೊತ್ತಿಗೆಯಲ್ಲಿರುವ ಮಾಹಿತಿಗಳನ್ನೇ ನಂಬಿ ಕುಳಿತುಕೊಳ್ಳಬೇಡಿ. ಆಗಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡುವ ಪರಿಷ್ಕೃತ ಸೂಚನೆಗಳಿಗಾಗಿ ಅಧಿಕೃತ ವೆಬ್ಸೈಟ್ ವೀಕ್ಷಿಸಿ.
ಯಾವತ್ತು ಬರಬೇಕು
ದಾಖಲೆ ಪರಿಶೀಲನೆಯು ಜೂ.5ರಿಂದ 23ರ ವರೆಗೆ ನಡೆಯಲಿದೆ. ಈ ಬಾರಿ ಒಬ್ಬ ವಿದ್ಯಾರ್ಥಿಗೆ ಗರಿಷ್ಠ 12 ವಿಭಾಗಗಳಲ್ಲಿ ರ್ಯಾಂಕ್ ಪಡೆಯುವ ಅವಕಾಶವಿದೆ. ವೈದ್ಯ, ಎಂಜಿನಿಯರಿಂಗ್, ಐಎಸ್ಎಂ ಅಂಡ್ ಎಚ್, ನಾಟಾ, ಫುಡ್ ಸೈನ್ಸ್, ಬಿಎಸ್ಸಿ ಕೃಷಿ, ಪಶುವೈದ್ಯ, ಬಿಟೆಕ್ ಕೃಷಿ ವಿಭಾಗದಲ್ಲಿ ಪಡೆದ ರ್ಯಾಂಕ್ಗಳಲ್ಲಿ ಯಾವುದು ಗರಿಷ್ಠ ಇದೆಯೋ ಆ ರ್ಯಾಂಕ್ಗೆ ನಿಗದಿಪಡಿಸಿದ ಸಮಯದಲ್ಲಿ ದಾಖಲಾತಿ ಪರಿಶೀಲನೆಗೆ ಆಗಮಿಸಬೇಕು. ಕೃಷಿ ಸಂಬಂಧಿ ಕೋರ್ಸ್ಗಳಿಗಾಗಿ ಕೃಷಿಕರ ಮಕ್ಕಳಿಗೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ಗಳನ್ನು ದಾಖಲೆ ಪರಿಶೀಲನೆ ದಿನ ನಿರ್ಧರಿಸುವುದಕ್ಕೆ ಪರಿಗಣಿಸಬೇಡಿ.
ಕೆನರಾ ಬ್ಯಾಂಕಿನಿಂದ ಕೌಂಟರ್
ಸಿಇಟಿ ಸಹಾಯವಾಣಿ ಕೇಂದ್ರದಲ್ಲಿ ಕೆನರಾ ಬ್ಯಾಂಕ್ ಶಾಖೆಯು ಜೂ.6ರಿಂದ ವಿದ್ಯಾಭ್ಯಾಸ ಸಾಲ ಕೌಂಟರ್ ತೆರೆಯಲಿದೆ.
6 ದಿನಗಳ ಕಾಲ ಸಾಲ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಿ, ಅರ್ಹ ವಿದ್ಯಾರ್ಥಿಗಳಿಗೆ ಬ್ಯಾಂಕಿನ ನಿಬಂಧನೆಗೊಳಪಟ್ಟು ಮಂಜೂರಾತಿ ಮಾಡಲಾಗುವುದು. ಈ ವ್ಯವಸ್ಥೆಯನ್ನು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಯಂ ವಾಸವಾಗಿರುವ ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು ಎಂದು ಕೆನರಾ ಬ್ಯಾಂಕ್ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್ ತಿಳಿಸಿದ್ದಾರೆ.
ಏನೇನು ತರಬೇಕು
ಸಿಇಟಿ 2013ರ ಪ್ರವೇಶ ಪತ್ರ
ಎಸ್ಸೆಸ್ಸೆಲ್ಸಿ ಅಂಕಪಟ್ಟಿ
ದ್ವಿತೀಯ ಪಿಯುಸಿ ಅಂಕಪಟ್ಟಿ
ಬಿಇಒ ಅವರ ಸಹಿ ಹೊಂದಿರುವ ವಿದ್ಯಾಭ್ಯಾಸ ಪ್ರಮಾಣ ಪತ್ರ
ಎರಡು ಪಾಸ್ಪೋರ್ಟ್ ಅಳತೆಯ ಫೋಟೋ
ಮೀಸಲಾತಿಗೆ ಅರ್ಹರಾಗಿದ್ದರೆ ಅಗತ್ಯವಾಗಿರುವ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಗ್ರಾಮೀಣ ವಿದ್ಯಾಭ್ಯಾಸ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವಿದ್ಯಾಭ್ಯಾಸದ ಪ್ರಮಾಣ ಪತ್ರ ಇತ್ಯಾದಿ