ಆಸಕ್ತಿ ಕಳೆದುಕೊಳ್ಳುತ್ತಿರುವ ಯಕ್ಷಗಾನ: ವಿಷಾದ
ಕ.ಪ್ರ.ವಾರ್ತೆ, ಸಾಗರ, ಜೂ.4
ಬೇರೆಬೇರೆ ಮಾಧ್ಯಮಗಳ ಹಾವಳಿಯಿಂದ ಜನರು ಯಕ್ಷಗಾನ ಕಲೆಯ ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ರಂಗಕರ್ಮಿ ಕೆ.ವಿ.ಅಕ್ಷರ ಹೇಳಿದರು.
ತಾಲೂಕಿನ ಹೆಗ್ಗೋಡಿನಲ್ಲಿ ಶಿವಮೊಗ್ಗದ ನಾಟ್ಯಶ್ರೀ ಕಲಾತಂಡ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಂಗಮದೆಡೆಗೆ ಯಕ್ಷ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಯಕ್ಷಗಾನ ಈಗ ದೊಡ್ಡದೊಡ್ಡ ನಗರಗಳತ್ತ ವಲಸೆ ಹೋಗಿದೆ. ವಲಸೆ ಹೋದಂತೆ ಅದು ತನ್ನ ಶಾಸ್ತ್ರೀಯತೆಯನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು.
ಶ್ಲಾಘನೀಯ ಪ್ರಯತ್ನ: ಯಕ್ಷಗಾನ ಕಲೆ ತನ್ನ ಹಿಂದಿನ ವೈಭವವನ್ನು ಕಳೆದುಕೊಳ್ಳುವ ಸಂದಿಗ್ದತೆಯ ನಡುವೆಯೂ ವಿದ್ವಾನ್ ದತ್ತಮೂರ್ತಿ ಭಟ್ ನಿರ್ದೇಶನದಲ್ಲಿ ಬಸವೇಶ್ವರ ಚರಿತ್ರೆ ಯಕ್ಷಗಾನವು ಯಕ್ಷಗಾನ ಸೀಮೋಲಂಘನದಲ್ಲಿ ಪ್ರಮುಖಪಾತ್ರ ವಹಿಸಿದೆ. ಇದೊಂದು ಶ್ಲಾಘನೀಯ ಪ್ರಯತ್ನ ಎಂದು ಹೇಳಿದರು.
ನಾಟ್ಯಶ್ರೀ ಕಲಾತಂಡದ ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ, ಯಕ್ಷಗಾನ ರಂಗಭೂಮಿಯ ಸಂಪ್ರದಾಯದ ಚೌಕಟ್ಟಿನಲ್ಲಿ ಮಹಾಮಾನವತಾವಾದಿ ಬಸವಣ್ಣನವರ ಜೀವನ ಚರಿತ್ರೆ ಅಳವಡಿಸಿ ಪ್ರದರ್ಶಿಸುವಲ್ಲಿ ಸಾಕಷ್ಟು ಸವಾಲುಗಳಿವೆ. ಈ ಎಲ್ಲ ಸವಾಲುಗಳ ನಡುವೆ ತತ್ವ ಮತ್ತು ಕಲೆಯ ಸೀಮೋಲಂಘನವಾಗಿದೆ. ಯುವಪೀಳಿಗೆಯಲ್ಲಿ ನಮ್ಮ ಶ್ರೇಷ್ಠ ಕಲೆಯಾಗಿರುವ ಯಕ್ಷಗಾನ ಕುರಿತು ಆಸಕ್ತಿ ಮೂಡಿಸುವ ಉದ್ದೇಶದಿಂದ ನಾಟ್ಯಶ್ರೀ ಕಲಾತಂಡ ಇಂತಹ ಹಲವು ಪ್ರಯೋಗಗಳನ್ನು ರಂಗದ ಮೇಲೆ ತರುವ ಪ್ರಯತ್ನ ನಡೆಸುತ್ತಿದೆ ಎಂದರು.
ನಂತರ ನಡೆದ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಜಗಜ್ಯೋತಿ ಬಸವೇಶ್ವರ ಚರಿತ್ರೆ ಯಕ್ಷಗಾನದ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ್, ಗಣೇಶ್ ಗಾಂವಕರ್ ಹಾಗೂ ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ, ಶಿರಳಗಿ ತಿಮ್ಮಪ್ಪ ಹೆಗಡೆ, ಸಂಜಯ ಬೆಳೆಯೂರು, ಶಂಕರ ಹೆಗಡೆ, ಅವಿನಾಶ್ ಇನ್ನಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.