ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗುಟ್ಕಾ ನಿಷೇಧ ವಿರೋಧಿಸಿ ಪ್ರತಿಭಟನೆ

Lingaraj Badiger
Updated On : 5 Jun 2013, 11:08 am

ಕ.ಪ್ರ.ವಾರ್ತೆ, ಭದ್ರಾವತಿ, ಜೂ.4
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರೋಗ್ಯದ ನೆಪವೊಡ್ಡಿ ಗುಟ್ಕಾ ನಿಷೇಧ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಭದ್ರಾವತಿ ನಗರ ಮತ್ತು ಗ್ರಾಮಾಂತರ ಘಟಕಗಳು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದವು.
ಆರೋಗ್ಯದ ಹಿತ ಕಾಯುವುದಾದರೆ ಬೀಡಿ, ಸಿಗರೆಟು ಮತ್ತಿತರ ತಂಬಾಕು ಪದಾರ್ಥಗಳು ಮತ್ತು ಮದ್ಯಪಾನವನ್ನೂ ನಿಷೇಧಿಸಬೇಕಿತ್ತು. ಬದಲಿಗೆ ಅಗ್ಗದ ಮದ್ಯವನ್ನು ಜಾರಿಗೆ ತಂದಿರುವ ಚಿಂತನೆ ಎಷ್ಟರ ಮಟ್ಟಿಗೆ ಸರಿ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
ಕಾರ್ಮಿಕ ವಿರೋಧಿ: ಇದರ ಬಗ್ಗೆ ಚಿಂತನೆ ಮಾಡದ ರೈತ ಮತ್ತು ಕಾರ್ಮಿಕ ವಿರೋಧಿ ಸರ್ಕಾರ ಮಧ್ಯವರ್ತಿಗಳ ಲಾಬಿಗೆ ಮಣಿದು ಗುಟ್ಕಾ ಮಾತ್ರ ನಿಷೇಧ ಮಾಡಿ, ಅಡಕೆ ಬೆಳೆಗಾರರ ಮತ್ತು ಅವಲಂಬಿತ ಕಾರ್ಮಿಕರ ಬದುಕನ್ನು ದುಸ್ತರವಾಗಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ 16 ಜಿಲ್ಲೆಗಳ 1.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 2.6 ಲಕ್ಷ ಟನ್ ಅಡಕೆ ಬೆಳೆಯಲಾಗುತ್ತಿದೆ. ಇದರಲ್ಲಿ ಸಾಕಷ್ಟು ಪ್ರಮಾಣ ಗುಟ್ಕಾ ಉತ್ಪಾದನೆಗೆ ಹೋಗುತ್ತದೆ.
ಈ ಬೆಳೆಯನ್ನು ನಂಬಿಕೊಂಡು ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಟ್ಕಾ ನಿಷೇಧದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ನಿಷೇಧ ಹೇರಿರುವುದು ರೈತ ಮತ್ತು ಕಾರ್ಮಿಕ ವರ್ಗಕ್ಕೆ ಮಾಡಿರುವ ಘೋರ ಅನ್ಯಾಯ.
ಮಧ್ಯವರ್ತಿಗಳ ಹುನ್ನಾರ: ಈ ಪರಿಸ್ಥಿತಿ ಲಾಭ ಪಡೆದ ಮಧ್ಯವರ್ತಿಗಳು ಅಡಕೆ ಧಾರಣೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರು. 2,000ದಿಂದ ರು. 3000 ವರೆಗೆ ಇಳಿಸಿದ್ದಾರೆ. ಹಾಗಾಗಿ ಇದು ಮಧ್ಯವರ್ತಿಗಳ ಹುನ್ನಾರ ಎಂದು ಸಾಬೀತಾಗಿದೆ. ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಗೋರಖ್‌ಸಿಂಗ್ ವರದಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವತಿಯಿಂದ ಗುಟ್ಕಾ ನಿಷೇಧ ಮಾಡಿಸಿ, ಅಡಕೆ ಬೆಳೆಗಾರರನ್ನು ಮತ್ತು ಅವಲಂಬಿತ ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿ ಮತ್ತಷ್ಟು ರೈತ-ಕಾರ್ಮಿಕರ ಆತ್ಮಹತ್ಯೆಗಳಿಗೆ ದಾರಿಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಡಕೆ ಬೆಳೆಗೆ ಪರ್ಯಾಯ ಅಡಕೆ ಉತ್ಪಾದನೆಗಳನ್ನು ಯೋಚಿಸದೆ ಪರ್ಯಾಯ ಮಾರುಕಟ್ಟೆ ರೂಪಿಸದೇ ಸಾಧಕ-ಬಾಧಕಗಳನ್ನು ಚಿಂತಿಸದೇ ಹಾಗೂ ಚರ್ಚಿಸದೇ ಮಧ್ಯವರ್ತಿಗಳ ಲಾಬಿಗೆ ಮಣಿದು ಏಕಾಏಕಿ ಗುಟ್ಕಾ ನಿಷೇಧ ಮಾಡಿರುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ಸ್‌ರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ನಗರ ಘಟಕದ ಅಧ್ಯಕ್ಷ ಎಂ.ಎಸ್.ಸುರೇಶಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಎಸ್.ಕೆ.ಗುರುಸ್ವಾಮಿ, ಬಿ.ಕೆ.ಶ್ರೀನಾಥ್ ಮೊದಲಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement