ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಕೆಳಗಿಳಿಸಿ

Lingaraj Badiger
Updated On : 5 Jun 2013, 10:59 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ.4
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರು ರಾಜಿನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಳೆಯ ಯೋಚನೆ ನಾಳೆಗೆ ಎಂಬ ನಿಲವು ತಾಳಿದೆ. ಬಿಜೆಪಿ ಏನಾದರೂ ಇವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಬೆಂಬಲಿಸುವುದಕ್ಕೂ ನಿರ್ಧರಿಸಿದೆ.
ಕರ್ನಾಟಕ ಜನತಾ ಪಕ್ಷದ ಉದ್ಭವವಾದಾಗಿನಿಂದ ಉಂಟಾಗಿರುವ ಜಿಲ್ಲಾ ಪಂಚಾಯ್ತಿಯ ಗೊಂದಲ ಈಗ ಕಗ್ಗಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ನಡೆದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಜಿಲ್ಲಾ ಪಂಚಾಯ್ತಿಯ 31 ಸದಸ್ಯರು ಹಲವು ಪಕ್ಷಗಳಲ್ಲಿ ಹಂಚಿಹೋಗಿದ್ದಾರೆ. ಚುನಾವಣೆಯ ನಂತರ 16 ಸದಸ್ಯರು ಆಯ್ಕೆಯಾಗಿದ್ದ ಬಿಜೆಪಿಯು ಅಧಿಕಾರಕ್ಕೇರಿತು. ಮೊದಲ 20 ತಿಂಗಳ ಅವಧಿಯಲ್ಲಿ ಶುಭಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿಯೇ ಮುಗಿಸಿತು.
ವೇದಿಕೆಯಲ್ಲಿ 11 ಸದಸ್ಯರು: ಎರಡನೇ ಅವಧಿಯಲ್ಲಿ ಗೀತಾ ಮಲ್ಲಿಕಾರ್ಜುನ್ ಅವರು ಅವರು ಅಧ್ಯಕ್ಷರಾದರು. ಯಾವಾಗ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಹೊರಬಂದಲೋ ಜಿಲ್ಲಾ ಪಂಚಾಯ್ತಿಯಲ್ಲಿಯೂ ಸಹ ತಳಮಳ ಶುರುವಾಯಿತು. ಕೊನೆಗೆ ಅಧ್ಯಕ್ಷ-ಉಪಾಧ್ಯಕ್ಷರೂ ಸೇರಿ 12 ಸದಸ್ಯರು ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ ರಚಿಸಿಕೊಂಡು ಪ್ರತ್ಯೇಕ ಆಸನಕ್ಕೆ ಕೋರಿಕೆ ಸಲ್ಲಿಸಿದರು. ಇವರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ನಾಯ್ಕ್ ಅವರು ಈ ಆಸೆ ಈಡೇರದೇ ಮತ್ತೆ ಬಿಜೆಪಿಗೆ ವಾಪಸಾದರು. ಹಾಲಿ ವೇದಿಕೆಯಲ್ಲಿ 11 ಸದಸ್ಯರಿದ್ದಾರೆ.
ರಾಜಿನಾಮೆ ಕಾಂಗ್ರೆಸ್ ಪಟ್ಟು: ವೇದಿಕೆಯು ಬಹುಮತ ಹೊಂದಿಲ್ಲ ಎಂಬುದು ಕಾಂಗ್ರೆಸ್ ವಾದ. ಹಾಗಾಗಿ ಯಾವುದೇ ಮೈತ್ರಿ ಮಾತುಕತೆಗೆ ಮುನ್ನ ಹಾಲಿ ಅಧ್ಯಕ್ಷ- ಉಪಾಧ್ಯಕ್ಷರು ರಾಜಿನಾಮೆ ನೀಡಬೇಕು ಎಂಬುದು ಕಾಂಗ್ರೆಸ್ ಸದಸ್ಯರ ಪಟ್ಟು.
ಇತ್ತ ಕಾಂಗ್ರೆಸ್ 13 ಸದಸ್ಯರನ್ನು ಹೊಂದಿದೆ. ಇಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಇವರಿಬ್ಬರು ಸೇರಿದರೂ ಆಡಳಿತ ನಡೆಸಲು ಸಾಧ್ಯವಿಲ್ಲ. ಸದ್ಯ ಯಾರಿಗೂ ಬಹುಮತ ಇರದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ವೇದಿಕೆಯ ಸದಸ್ಯರ ಬೆಂಬಲ ಬೇಕೇಬೇಕು.
ಈ ಬಗ್ಗೆ ಈಗ ಕಾಂಗ್ರೆಸ್ ಚರ್ಚಿಸಲು ತಯಾರಿಲ್ಲ. ಮೊದಲು ಅವರು ರಾಜಿನಾಮೆ ನೀಡಲಿ. ನಂತರ ಮುಂದಿನ ಮಾತು ಎನ್ನುತ್ತಿದೆ. ಅಲ್ಲದೇ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದಲ್ಲಿ ಬೆಂಬಲಿಸುವುದಕ್ಕೂ ಸಿದ್ಧವಾಗಿದೆ.
ಸಾಮಾನ್ಯ ಸಭೆ ಯಾವತ್ತು: ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯು ಕನಿಷ್ಟ 2 ತಿಂಗಳಿಗೊಮ್ಮೆ ನಡೆಯಬೇಕು.
 ಈ ಅವಧಿ ಮುಗಿದರೂ ಸಭೆ ನಡೆಯುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಸ್ಥಾಯಿ ಸಮಿತಿ ಸಭೆಗಳೆಲ್ಲಾ ಮುಗಿದಿವೆ. ಈಗ ನಡೆಯಬೇಕಿರುವುದು ಸ್ಥಾಯಿ ಸಮಿತಿ ನಿರ್ಣಯಗಳ ಅನುಮೋದನೆಗಾಗಿ ಸಾಮಾನ್ಯ ಸಭೆ ಮಾತ್ರ.
2011ರ ಅಕ್ಟೋಬರ್ 8ರಂದು ಗೀತಾ- ಹೇಮಾ ಅವರು ಜಿ.ಪಂ. ಮುಖ್ಯಸ್ಥರಾಗಿ ಅಧಿಕಾರಕ್ಕೇರಿದರು. ತಾಂತ್ರಿಕವಾಗಿ 6 ತಿಂಗಳ ವರೆಗೆ ಇವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತಿಲ್ಲ.
 ಈ ಅವಧಿಯೂ ಸಹ ಏ.8ಕ್ಕೆ ಮುಗಿದಿದೆ. ಈಗ ಏನು ಬೇಕಾದರೂ ಆಗಬಹುದು. ಆದರೆ, ಪರಸ್ಪರ ಅವಲಂಭನೆ ಇಲ್ಲದೆ ಯಾರೂ ಅಧಿಕಾರ ನಡೆಸಲು ಆಗದು ಎಂಬುದು ಮಾತ್ರ ಸತ್ಯ.
-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement