ಹೆಚ್ಚಿನ ಆಧಾರ್ ಕೇಂದ್ರಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.4
ಆಧಾರ್ ನೋಂದಣಿ ಕೇಂದ್ರ ಹಾಗೂ ಪಡಿತರ ಸೇವಾ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವಂತೆ ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆಯ ಗ್ರಾಮಾಂತರ ಘಟಕದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪ್ರತಿಯೊಬ್ಬ ನಾಗರಿಕರಿಗೂ ಏಕ ರೂಪದ ನಕಲು ಮಾಡಲಾಗದ ಗುರುತಿನ ಚೀಟಿಯನ್ನು ಒದಗಿಸುವ ದೃಷ್ಟಿಯಿಂದ ಆಧಾರ್ ಗುರುತಿನ ಚೀಟಿ ನೀಡುವ ಯೋಜನೆ ಜಾರಿಗೆ ತಂದಿದೆ. ಶಿವಮೊಗ್ಗ ತಾಲೂಕಿನಲ್ಲಿ ಹಲವಾರು ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆದಿದ್ದರೂ ಅದರ ಪ್ರಮಾಣ ಸಾಕಾಗುತ್ತಿಲ್ಲ ಎಂಬುದು ವೇದಿಕೆ ಸದಸ್ಯರ ವಿವರಣೆ.
100 ಮಂದಿ ಮಾತ್ರ ಸಾಧ್ಯ: ಪ್ರತಿಯೊಬ್ಬ ನಾಗರಿಕರ, ಫಲಾನುಭವಿಗಳ ಬಯೋವುಟ್ರಿಕ್ ವಿವರ ಪಡೆದು ಕಾರ್ಡ್ ಸಿದ್ಧಗೊಳಿಸಲು ಕನಿಷ್ಠ 20 ನಿಮಿಷ ಬೇಕಾಗುತ್ತದೆ. ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲೂ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಒಂದು ಕೇಂದ್ರದಲ್ಲಿ ಪ್ರತಿ ದಿನ ಹೆಚ್ಚೆಂದರೆ 100 ಜನ ನಾಗರಿರಿಗೆ ಮಾತ್ರ ಆಧಾರ್ ನೋಂದಣಿ ಮಾಡಲು ಸಾಧ್ಯವಾಗುತ್ತಿದೆ.
ಅಲ್ಲದೇ ನಗರಸಭಾ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ ಈ ಯೋಜನೆ ದುರುಪಯೋಗ ತಡೆಗಟ್ಟಲು ಹಲವಾರು ನೋಂದಣಿ ಕೇಂದ್ರಗಳನ್ನು ಉಪ ವಿಭಾಗಾಧಿಕಾರಿ ಮುಚ್ಚಿದ್ದಾರೆ. ಹೀಗಾಗಿ ಇಲ್ಲಿಯವರೆಗೂ ಶಿವಮೊಗ್ಗ ತಾಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ನಾಗರಿಕರು ಆಧಾರ್ ನೋಂದಣಿ ಮಾಡಿಸಲು ಸಾಧ್ಯವಾಗಿಲ್ಲ ಎಂದು ವೇದಿಕೆ ಹೇಳಿದೆ.
ಹಣ ವಸೂಲಿ: ಅದೇ ರೀತಿ ಪಡಿತರ ಚೀಟಿ ಫೋಟೋ ತೆಗೆಯುವ ಟೆಂಡರ್ ಪಡೆದಿದ್ದ ಖಾಸಗಿ ಸಂಸ್ಥೆಗಳು ಮಾಡಿರುವ ಲೋಪದಿಂದಾಗಿ ಪಡಿತರ ಪಡೆಯಲು ಸಾರ್ವಜನಿಕರು ಮತ್ತೊಮ್ಮೆ ವಿವರಗಳನ್ನು ನೀಡಿ ಕಾರ್ಡ್ ಪಡೆಯಬೇಕಾಗಿದೆ. ಪ್ರಾಂಚೈಸಿ ಕೇಂದ್ರಗಳಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಫೋಟೋ ತೆಗೆಸಬೇಕಾಗಿರುವುದರಿಂದ ಪ್ರತಿ ಸೇವಾ ಕೇಂದ್ರಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ಅಲ್ಲದೇ ಕೆಲವು ಸೇವಾ ಕೇಂದ್ರಗಳಲ್ಲಿ ಫಲಾನುಭವಿಗಳಿಂದ 100 ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವೇದಿಕೆ ಆರೋಪಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ನೋಂದಣಿಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ತಿನ ತೊಂದರೆಯಿಂದಾಗಿ ಗ್ರಾಮ ಪಂಚಾಯಿತಿಯ ಇತರೆ ಕೆಲಸಗಳಿಗೆ ಅಡ್ಡಿಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಈ ಕೂಡಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳನ್ನು ತೆರೆದು ಪ್ರತಿಯೊಬ್ಬ ನಾಗರಿಕರು ಆಧಾರ್ ಕಾರ್ಡ್ ಹೊಂದಲು ಅವಕಾಶ ಕಲ್ಪಿಸಿಕೊಡುವ ಜೊತೆಯಲ್ಲಿ ಪಡಿತರ ಸೇವಾ ಕೇಂದ್ರಗಳನ್ನು ಸಹ ಹೆಚ್ಚಿನ ಪಡಿತರ ಸೇವಾ ಕೇಂದ್ರಗಳಲ್ಲಿರುವ ಗೊಂದಲ ಹಾಗೂ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ವೇದಿಕೆ ಸದಸ್ಯರು ಒತ್ತಾಯಿಸಿದರು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವೇದಿಕೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ನರಸಿಂಹ, ಮಂಜುನಾಥ, ಶಾಂತಮ್ಮ, ಸತೀಶ್ ಮೊದಲಾದವರಿದ್ದರು.