ಅಡಕೆ ವಹಿವಾಟು ನಿರಾತಂಕ
ಕ.ಪ್ರ. ವಾರ್ತೆ , ಶಿವಮೊಗ್ಗ , ಜೂ. 5
ಗುಟ್ಕಾ ನಿಷೇಧದ ನಂತರ ಅಡಕೆ ಬೆಳೆಗಾರರು ಕಂಗಾಲಾಗಿದ್ದರು. ಎಲ್ಲಿ ಬೆಲೆ ಪಾತಾಳಕ್ಕೆ ತಲುಪಿ ತಮ್ಮ ಬದುಕು ಮೂರಾಬಟ್ಟೆಯಾಗುತ್ತದೋ ಎಂಬ ತಲ್ಲಣ ಉಂಟಾಗಿತ್ತು. ಆದರೆ, ಸದ್ಯಕ್ಕಂತೂ ಬೆಳೆಗಾರರು ಆತಂಕ ಪಡುವ ಲಕ್ಷಣ ಕಂಡುಬಂದಿಲ್ಲ. ಅಡಕೆ ವಹಿವಾಟು ನಿರಾತಂಕವಾಗಿ ಸಾಗಿದ್ದು ಅಡಕೆಗೆ ಉತ್ತಮ ಬೆಲೆಯೇ ಸಿಗುತ್ತಿದೆ.
ಮೇ 30ರ ನಂತರ ಅಡಕೆ ಬೆಲೆ ಸರಾಸರಿ ಒಂದು ಸಾವಿರ ರುಪಾಯಿ ವರೆಗೆ ಇಳಿದಿದ್ದು ಬಿಟ್ಟರೆ ಅಷ್ಟಾಗಿ ಕುಸಿತ ಕಂಡುಬಂದಿಲ್ಲ ಎಂದು ಅಡಕೆ ವ್ಯಾಪಾರಸ್ಥರೇ ಹೇಳುತ್ತಾರೆ.
ಎಪಿಎಂಸಿ ಕಾರ್ಯದರ್ಶಿ ಶರಶ್ಚಂದ್ರ ರಾನಡೆ ಹೇಳುವಂತೆ, ಗುಟ್ಕಾ ನಿಷೇಧದ ನಂತರವೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಕೆ ಮಾರಾಟ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ವಹಿವಾಟು ಮಾತ್ರ ಕಡಿಮೆಯಾಗಿದೆ.
ಮಾರುಕಟ್ಟೆಯಲ್ಲಿ ಏನಾಯ್ತು?: ರಾಜ್ಯದಲ್ಲಿ ಗುಟ್ಕಾ ನಿಷೇಧಕ್ಕಿಂತ ಮುಂಚೆ ಇದ್ದ ಬೆಲೆಗೂ ಈಗಿನ ಬೆಲೆಗೂ ಅಂತಹ ವ್ಯತ್ಯಾಸವಾಗಿಲ್ಲ. ಗುಟ್ಕಾಗೆ ಬಳಕೆಯಾಗುವುದು ಬೆಟ್ಟೆ ಮತ್ತು ಇಡಿ. ಈ ಎರಡು ಬಗೆಯ ಅಡಕೆಗೆ ಬೇಡಿಕೆ ಕಡಿಮೆಯಾಗಿಲ್ಲ. ಅಡಕೆಯಲ್ಲಿ ಪ್ರಧಾನವಾದ ಸರಕು ಸರಾಸರಿ 19 ಸಾವಿರ ಕನಿಷ್ಠ ಬೆಲೆಯನ್ನು ಉಳಿಸಿಕೊಂಡಿದೆ. ಗರಿಷ್ಠ ಬೆಲೆಯಲ್ಲಿ ಮಾತ್ರ ಕೊಂಚ ಇಳಿಕೆ ಕಂಡಿದೆ.
ಆದರೆ, ವಹಿವಾಟು ಮಾತ್ರ ಶೇ.50ಕ್ಕಿಂತ ಕಡಿಮೆಯಾಗಿದೆ. ದಿನವೊಂದಕ್ಕೆ ಸರಾಸರಿ 2000 ಕ್ವಿಂಟಲ್ ವಹಿವಾಟು ನಡೆದರೆ, ಗುಟ್ಕಾ ನಿಷೇಧದ ನಂತರದ ಬೆಳವಣಿಗೆಯಲ್ಲಿ ದಿನವೊಂದಕ್ಕೆ 500ರಿಂದ 600 ಕ್ವಿಂಟಲ್‌ನಷ್ಟು ಮಾತ್ರ ಅಡಕೆ ಖರೀದಿಯಾಗುತ್ತಿದೆ.
ಪ್ರಮುಖ ಸಹಕಾರ ಸಂಸ್ಥೆ, ಖರೀದಿದಾರರು ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ಖರೀದಿ ಮಾತ್ರ ನಿರಾತಂಕವಾಗಿ ಸಾಗಿದೆ. ಇನ್ನೊಂದು ಅಚ್ಚರಿ ಎಂದರೆ ಬೆಲೆಯೂ ಇಳಿಕೆಯಾಗಿಲ್ಲ. ಮಂಗಳವಾರ ಸರಕು ಹೊರತುಪಡಿಸಿ ಉಳಿದೆಲ್ಲಾ ಪ್ರಕಾರದ ಅಡಕೆ ಬೆಲೆಯಲ್ಲಿ ಕೊಂಚ ಏರಿಕೆಯೇ ಆಗಿದೆ.
ಅಡಕೆ ಹೊರ ರಾಜ್ಯಕ್ಕೆ: ರಾಜ್ಯದಲ್ಲಿ ಗುಟ್ಕಾ ನಿಷೇಧದ ನಂತರ ರಾಜ್ಯದೊಳಗಿನ ಗುಟ್ಕಾ ತಯಾರಿಕಾ ಕಂಪನಿಗಳ ಚಟುವಟಿಕೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯಕ್ಕಷ್ಟೇ ಅಡಕೆ ರಫ್ತಾಗುತ್ತಿದೆ ಎಂಬುದು ಪ್ರಮುಖ ಅಡಕೆ ಮಂಡಿ ಮಾಲಿಕರೊಬ್ಬರ ವಿವರಣೆ.
ಇನ್ನೊಂದು ವಿಶೇಷ ಸಂಗತಿ ಎಂದರೆ, ಯಾವ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇದೆ ಎಂಬುದರ ಮಾಹಿತಿಯನ್ನು ಯಾವುದೇ ಪ್ರಮುಖ ಅಡಕೆ ಮಂಡಿ ವರ್ತಕರು ಬಿಟ್ಟು ಕೊಡುತ್ತಿಲ್ಲ.
ಎಪಿಎಂಸಿ ಅಧಿಕಾರಿಗಳ ಮಾಹಿತಿಯಂತೆ ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶ ಕಡೆಯಿಂದ ಒಟ್ಟಾರೆ ಬೇಡಿಕೆ ಇದ್ದು, ಈ ದಿಕ್ಕಿನತ್ತಲೇ ಅಡಕೆ ಸರಬರಾಜಾಗುತ್ತಿದೆ.
ಇನ್ನೂ ಇದೆ ಅಳಕು: ಪ್ರಮುಖ ಅಡಕೆ ಖರೀದಿದಾರರು ಇನ್ನೊಂದು ವಾರ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಮೇ 30ಕ್ಕಿಂತ ಹಿಂದಿನ ಬೇಡಿಕೆಯನುಸಾರ ಈಗ ಅಡಕೆ ಪೂರೈಕೆಯಾಗುತ್ತಿದೆ. ಮೇ 30ರ ನಂತರ ಅಷ್ಟಾಗಿ ಬೇಡಿಕೆ ಬಂದಿಲ್ಲ. ಹೀಗಾಗಿ ಗುಟ್ಕಾ ನಿಷೇಧದಿಂದ ಅಡಕೆ ಬೆಲೆಯ ಮೇಲಿನ ಪರಿಣಾಮಗಳು ಇನ್ನೊಂದು ವಾರದ ನಂತರ ತಿಳಿಯಲಿದೆ. ನಂತರಷ್ಟೇ ಅಡಕೆ ನಿಜ ಮೌಲ್ಯ ತಿಳಿಯುತ್ತದೆ ಎಂಬುದು ಪ್ರಮುಖ ಮಂಡಿ ವರ್ತಕರ ಅಭಿಪ್ರಾಯ.
ವರ್ತಕರು ಕಾದು ನೋಡುವ ತಂತ್ರ ಅನುಸರಿಸಿದರೆ, ಬೆಳೆಗಾರರಲ್ಲಿ ಇನ್ನೂ ಆತಂಕ ಇದ್ದೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಪ್ರತಿ ದಿನವೂ ಇಲ್ಲಿನ ನೂರಾರು ಮಂಡಿಗಳು, ಸಹಕಾರ ಸಂಘಗಳ ದೂರವಾಣಿ ರಿಂಗಣಿಸುತ್ತಲೇ ಇರುತ್ತವೆ, ಅಡಕೆ ಬೆಳೆಗಾರರು ತಮ್ಮ ಮಂಡಿ, ಸಹಕಾರ ಸಂಘಗಳಲ್ಲಿ ಬೆಲೆ ಏನಾಯಿತು ಎಂದು ವಿಚಾರಣೆ ನಡೆಸುತ್ತಲೇ ಇದ್ದಾರೆ. ಗುಟ್ಕಾ ನಿಷೇಧಕ್ಕೆ ಮುನ್ನ ಮುಂದಿನ ದಿನದ ಬೆಲೆ ಅಂದಾಜು ಹೇಳುತ್ತಿದ್ದ ಮಂಡಿ ಹಾಗೂ ಸಹಕಾರ ಸಂಘದ ಸಿಬ್ಬಂದಿ ಈಗ ಸಲಹೆ ಕೊಡುವುದನ್ನೇ ನಿಲ್ಲಿಸಿದ್ದಾರೆ. ಬೆಲೆ ಏನಾಗಬಹುದೆಂಬುದು ಅವರಿಗೂ ಅಂದಾಜಿಸಲಾಗುತ್ತಿಲ್ಲ.
ಶಿವಮೊಗ್ಗ ಮಾರುಕಟ್ಟೆಲ್ಲಿನ ಅಡಕೆ ಧಾರಣೆ (ಪ್ರತಿ ಕ್ವಿಂಟಲ್‌ಗೆ ಸಾವಿರ ದರದಲ್ಲಿ)
ಮೇ 29 ಮೇ 30 ಮೇ 31 ಜೂ.03
ಬೆಟ್ಟೆ 16,621-18,599 17,189-19,060 16,619-17,719 16,661-17,681
ಇಡಿ 16,009-17,895 17,140-18,389 16,009-16,963 15,090-17,119
ಗೊರಬಲು 7,829-11,801 7,809-12,069 6,890-11,789 8,199-11,799
ರಾಶಿ ಇಡಿ 17,569-18,699 18,009-19,069 16,429-17,709 17,269-17,899
ಸರಕು 19,359-26,860 20,009-26,909 19,809 -26,692 20,019-25,976
ಚಿಟಕಿ ಗುಟ್ಕಾಗೆ ಕೆಜಿ ಅಕ್ಕಿ ಬೆಲೆ!
ಚಿಟಕಿ ಗುಟ್ಕಾಗೆ ಈಗ ಅಕ್ಕಿಯ ಬೆಲೆ ಬಂದಿದೆ. ಶಿವಮೊಗ್ಗದ ಮಾರುಕಟ್ಟೆಯಲ್ಲಿ ಪ್ರಮುಖ ಗುಟ್ಕಾ ಕಂಪನಿಯ ಸ್ಯಾಚೆಟ್ ಒಂದಕ್ಕೆ ಗ್ರಾಹಕರು 50 ತೆರಬೇಕಾಗಿದೆ. ವಿಮಲ್‌ನ ಸಣ್ಣ ಸ್ಯಾಚೆಟ್‌ಗೆ 5, ದೊಡ್ಡ ಸ್ಯಾಚೆಟ್‌ಗೆ 15-20ಕ್ಕೆ ಮಾರಾಟವಾಗುತ್ತಿದ್ದರೆ, ಸೂಪರ್, ಸ್ಟಾರ್ 4 ರಿಂದ 8-10ಕ್ಕೆ ಏರಿಕೆಯಾಗಿದೆ. ಇನ್ನು ಜೇಬಲ್ಲಿ ಕಾಸಿಟ್ಟುಕೊಳ್ಳುವ ಹಾಗೂ ಕ್ಲಾಸ್ ಮಂದಿ ಬಳಸುವ ಮಾಣಿಕ್‌ಚಂದ್(ಆರ್‌ಎಂಡಿ)ಸಣ್ಣ ಸ್ಯಾಚೆಟ್‌ಗೆ 15-20 ಆದರೆ, ದೊಡ್ಡ ಸ್ಯಾಚೆಟ್‌ಗೆ 50 ಕ್ಕೆ ಬಿಕರಿಯಾಗುತ್ತಿದೆ. ಗುಟ್ಕಾ ಬೆಲೆಯನ್ನು ಇಷ್ಟು ಬೆಲೆಗೆ ನಿಗದಿ ಮಾಡುತ್ತಿರುವವರು ಯಾರೆಂಬುದು ಮಾತ್ರ ನಿಗೂಢ. ಶಿವಮೊಗ್ಗದ ಕೆಲವು ಬಡಾವಣೆಯಲ್ಲಿನ ಗೂಡಂಗಡಿಗಳಲ್ಲಿ ಗುಟ್ಕಾ ಬೆಲೆ ವಿಚಾರಿಸಿದಾಗ ಈ ಮಾಹಿತಿ ತಿಳಿಯಿತು.
- ಶ್ರೀಕಾಂತ/ಮೋಹನ