ಇಸಿಎಚ್ಎಸ್ ಕ್ಲಿನಿಕ್ಗೆ ವಿ.ಕೆ. ಪಿಳ್ಳೈ ಭೇಟಿ
ಶಿವಮೊಗ್ಗ: ಭಾರತೀಯ ಸೇನೆ ಚೆನ್ನೈ ವಿಭಾಗದ ಲೆಫ್ಟಿನೆಂಟ್ ಜನರಲ್ ವಿ.ಕೆ. ಪಿಳ್ಳೈ ಮತ್ತು ಬೆಂಗಳೂರು ವಿಭಾಗದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಎ.ಕೆ. ಸಿಂಗ್ ನಗರದ ಅಚ್ಯುತರಾವ್ ಲೇಔಟ್ನ ಇಸಿಎಚ್ಎಸ್ ಪಾಲಿಕ್ಲಿನಿಕ್ಗೆ ಜೂನ್ 7ರಂದು ಬೆಳಿಗ್ಗೆ 8.30ಕ್ಕೆ ಭೇಟಿ ನೀಡಿ, ಕ್ಲಿನಿಕ್ನ ಪ್ರಗತಿ ಪರಿಶೀಲಿಸಲಿದ್ದಾರೆ.
ಪ್ಲಾಸ್ಟಿಕ್ ಲೋಟಗಳ ಬಳಕೆ ನಿಷೇಧ
ಶಿವಮೊಗ್ಗ: ರಾಜ್ಯದ್ಯಂತ ಡೇಂಘೀ ಜ್ವರ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಡೇಂಘೀ ಹರಡುವ ಸೊಳ್ಳೆಗಳು ತಿಳಿನೀರಿನಲ್ಲಿ ಹರಡುವ ಕಾರಣ, ಪ್ಲಾಸ್ಟಿಕ್ ಲೋಟಗಳ ಉಪಯೋಗ ಮತ್ತು ಮಾರಾಟ ಮಾಡುವುದನ್ನು ಮೂರು ತಿಂಗಳ ಅವಧಿಗೆ ನಿಷೇಧಿಸಿ ನಗರಸಭಾ ಪೌರಾಯುಕ್ತ ಎಸ್. ಗಣೇಶ್ ಆದೇಶ ಹೊರಡಿಸಿದ್ದಾರೆ.
ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಲೋಟಗಳನ್ನು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ಖರೀದಿಸಿ ಬಳಸದಂತೆ ಸೂಚಿಸಿರುವ ಅವರು, ನಿಯಮ ಉಲ್ಲಂಘಿಸಿ, ಪ್ಲಾಸ್ಟಿಕ್ ಲೋಟಗಳ ಮಾರಾಟ ಮಾಡುವವರನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಸಾರ್ವಜನಿಕರು ಪ್ಲಾಸ್ಟಿಕ್ ಲೋಟಗಳ ಉಪಯೋಗವನ್ನು ತ್ಯಜಿಸಿ, ಡೇಂಘೀ ಜ್ವರ ನಿಯಂತ್ರಣಕ್ಕೆ ಸಹಕರಿಸುವಂತೆ ಆದೇಶಿಸಿದ್ದಾರೆ.
ಕಾಣೆಯಾಗಿದ್ದಾರೆ
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮೂವರು ಕಾಣಿಯಾಗಿದ್ದಾರೆ.
ಸೊರಬ ತಾಲೂಕು ಗಿಣಿವಾಲ ವಡ್ಡಿಗೆರೆ ಗ್ರಾಮದ ನಿವಾಸಿ ಶೋಭಾ (19)ಕಾಣೆಯಾಗಿದ್ದಾರೆ. 5ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಚುಕ್ಕೆ ಇರುವ ನೈಟಿ ಧರಿಸಿರುತ್ತಾರೆ, ಕನ್ನಡ ಮಾತನಾಡುತ್ತಾರೆ.
ತಾಲೂಕಿನ ಬಾಸ ಬಿಳಗಲಿ ಗ್ರಾಮ ನಿವಾಸಿ ಕುತ್ತೇಜಾ ಅಬ್ದೂಲ್ ಕರೀಮ್ (38)ಕಾಣೆಯಾಗಿದ್ದು, 5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಕನ್ನಡ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಹೂವಿನ ಸೀರೆ ನೀಲಿ ಬ್ಲೌಸ್ ಧರಿಸಿರುತ್ತಾರೆ.
ಇದೇ ತಾಲೂಕಿನ ನಲ್ಲಿಕೊಪ್ಪ ಗ್ರಾಮದ ನಿವಾಸಿ ಸಂತೋಷ್ (15)ಕಾಣೆಯಾಗಿದ್ದಾರೆ. 4ಅಡಿ 6ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕೆಂಪು ಮೈಬಣ್ಣ, ದುಂಡು ಮುಖ, ಕನ್ನಡ ಮಾತನಾಡುತ್ತಾರೆ. ಆಕಾಶ ನೀಲಿ ಚೆಕ್ಸ್ ಯೂನಿಫಾರಂ ಡ್ರಸ್ ಧರಿಸಿರುತ್ತಾರೆ. ಸಾರ್ವಜನಿಕರು ಕಾಣೆಯಾಗಿರುವ ಈ ಮೇಲ್ಕಂಡವರ ಸುಳಿವು ದೊರೆತಲ್ಲಿ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ವಿವರಗಳಿಗಾಗಿ 08184-267135, 9480803369.
ನೀವೇ ವಿಷಯ ಆಯ್ದುಕೊಳ್ಳಿ: ಡಿಸಿ ಸಲಹೆ
ಶಿವಮೊಗ್ಗ: ನೀಮಗಿಷ್ಟವಾದ ವಿಷಯವನ್ನು ನೀವೆ ಆಯ್ದುಕೊಳ್ಳಿ, ತನ್ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ವೃತ್ತಿಪರ ಶಿಕ್ಷಣ ಕೋರ್ಸ್ಣಗಳ ಸೀಟು ಆಯ್ಕೆಗೆ ಅರ್ಹರಾಗಿರುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಗರದ ಜವಾಹರ ಲಾಲ್ ನೆಹರು ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜ್ನಲ್ಲಿ ಬುಧವಾರ ಸಿಇಟಿ-2013ರ ಆನ್ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವೃತ್ತಿಪರ ಶಿಕ್ಷಣ ಕೋರ್ಸ್ಣಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಕೌನ್ಸಿಲಿಂಗ್ ನಡೆಸುವಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮಾದರಿಯಾಗಿದ್ದು, ಪಾರದರ್ಶಕವಾಗಿ ಪರೀಕ್ಷೆ ಹಾಗೂ ಸೀಟು ಹಂಚಿಕೆ ನಡೆಯುವುದು ವಿಶೇಷ ಎಂದರು.
ಇಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ಇಚ್ಛೆಯಂತೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಂಜಿನಿಯರಿಂಗ್, ಮೆಡಿಕಲ್ ಪದವಿಗಳನ್ನು ಮುಗಿಸಿದ ನಂತರ ಸರ್ಕಾರಿ ಹುದ್ದೆಗೆ ಸೇರಲು ಆಸಕ್ತಿ ತೋರಬೇಕು ಎಂದ ಅವರು, ಮೆಡಿಕಲ್ ವ್ಯಾಸಂಗ ಮಾಡಿದವರು ಸರ್ಕಾರಿ ಆಸ್ಪತ್ರೆಗಳಿಗೆ ಸೇವೆಗೆ ಸೇರುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದಾಗಿದೆ. ಇದರಿಂದ ಭವಿಷ್ಯವೂ ಉಜ್ವಲಗೊಳ್ಳಲಿದೆ ಎಂದರು.