ಗುಟ್ಕಾ ನಿಷೇಧದ ಮೂಲಕ ರೈತರಿಗೆ ಅನ್ಯಾಯ ಮಾಡಿದ ಸರ್ಕಾರ
ಶಿವಮೊಗ್ಗ: ಕರ್ನಾಟಕ ಸರ್ಕಾರ ಗುಟ್ಕಾ ಮಾರಾಟ ನಿಷೇಧ ಮಾಡುವುದರ ಮೂಲಕ ಅಡಕೆ ಬೆಳೆಗಾರರಿಗೆ ಹಾಗೂ ಅಡಕೆ ಬೆಳೆ ಅವಲಂಭಿಸಿದ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಎಂದು ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ ಆರೋಪಿಸಿದ್ದಾರೆ.
ಶಿವಮೊಗ್ಗ, ಉತ್ತರಕನ್ನಡ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಬಯಲು ಸೀಮೆಯ ಅಡಕೆ ಬೆಳೆಗಾರರು ಈಗಾಗಲೇ ಹಳದಿ ಎಲೆ ರೋಗಕ್ಕೆ ತುತ್ತಾಗಿ ಕೇಂದ್ರ ಸರ್ಕಾರದ ಪರಿಹಾರ ಸಹಾಯ ಹಸ್ತಕ್ಕಾಗಿ ಕಾಯುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು ಗಾಯಕ್ಕೆ ಉಪ್ಪು ಸುರಿದಂತಾಗಿದೆ ಎಂದು ಅವರು ಆಪಾದಿಸಿದ್ದಾರೆ.
ಪರಿಹಾರ: ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಕೇಂದ್ರ ಸಚಿವ ವೀರಪ್ಪಮೊಯ್ಲಿ, ಮುನಿಯಪ್ಪ ಮತ್ತು ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ, ಚರ್ಚಿಸಿ ಹಳದಿ ರೋಗಕ್ಕೆ ಪರಿಹಾರ ನೀಡಲು, ವಿಶೇಷ ಹಣಕಾಸು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಏಕಾಏಕಿ ಗುಟ್ಕಾ ನಿಷೇಧ ಮಾಡಿರುವುದರಿಂದ ಅಡಕೆ ಬೆಲೆ ಕುಸಿತಗೊಳ್ಳಲಿದ್ದು, ಇದನ್ನೇ ನಂಬಿ ಬದುಕುತ್ತಿರುವ ಬೆಳೆಗಾರರು, ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ವಾಧಿಕಾರಿ ಧೋರಣೆ: ಸರ್ಕಾರ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು, ರೈತ ಮುಖಂಡರು, ಅಡಕೆ ಬೆಳೆಗಾರರು, ಅಡಕೆ ಬೆಳೆಗಾರರ ಸಹಕಾರ ಸಂಘ, ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಆಗು- ಹೋಗುಗಳ ಬಗ್ಗೆ ಚರ್ಚಿಸದೆ, ಈ ನಿರ್ಧಾರವನ್ನು ತಳೆದಿರುವುದು ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ ಎಂದು ಅವರು ದೂರಿದ್ದಾರೆ.
ಸಹಾಯಕ್ಕೆ ಧಾವಿಸಬೇಕು: ಆರೋಗ್ಯಕ್ಕೆ ಮಾರಕವಾದ ವಸ್ತು ಗುಟ್ಕಾ ಮಾತ್ರವಲ್ಲ. ಸಿಗರೇಟು, ಮದ್ಯಪಾನ, ಹಲವು ತಂಪುಪಾನೀಯ ಮುಂತಾದ ಉತ್ಪಾದನೆಗಳನ್ನು ನಿಷೇಧ ಮಾಡದೇ ಅಡಕೆ ಉತ್ಪಾದಕವಾದ ಗುಟ್ಕಾ ಮಾತ್ರ ನಿಷೇಧ ಮಾಡಿರುವುದು ಸರಿಯಲ್ಲ ಎಂದಿರುವ ಅವರು, ಕೂಡಲೇ ಸರ್ಕಾರ ಅಡಕೆ ಬೆಳೆಗಾರರನ್ನು, ವಿಚಾರವಂತರ ಸಭೆ ಕರೆದು, ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದರೊಂದಿಗೆ ಹಳದಿ ರೋಗಕ್ಕೆ ತುತ್ತಾಗಿರುವ ಪ್ರದೇಶದ ಬೆಳೆಗಾರರಿಗೆ ಗೋರಖ್ ಸಿಂಗ್ ವರದಿಯಂತೆ ಹಣಕಾಸು ಸಾಲ ಮನ್ನಾ ಮಾಡುವುದರೊಂದಿಗೆ ಅಡಕೆ ಬೆಳೆಗಾರರ ಸಹಾಯಕ್ಕೆ ಧಾವಿಸಬೇಕು. ಇಲ್ಲವಾದಲ್ಲಿ ಎಲ್ಲಾ ಬೆಳೆಗಾರರು ಹೋರಾಟದ ಮೂಲಕ ಸರ್ಕಾರನ್ನು ಎಚ್ಚರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಭಟನೆ
ಶಿಕಾರಿಪುರ: ಅಡಕೆ ಬೆಳೆಗಾರರು ನಿತ್ಯ ಹಲವು ಸಮಸ್ಯೆಗಳಿಂದ ತೊಂದೆರೆ ಅನುಭವಿಸುತ್ತಿದ್ದು, ಇದೀಗ ರಾಜ್ಯ ಸರ್ಕಾರ ಏಕಾಏಕಿ ಗುಟ್ಕಾ ನಿಷೇಧಿಸುವ ಮೂಲಕ ಅಡಕೆ ಬೆಳೆಗಾರರ ವಿರುದ್ಧ ಗದಾಪ್ರಹಾರಕ್ಕೆ ಮುಂದಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮಂಜುನಾಥ್ ಕೊಪ್ಪಲು ಕಿಡಿಕಾರಿದ್ದಾರೆ.
ಮುನ್ನೆಚ್ಚರಿಕೆ ನೀಡದೆ ಗುಟ್ಕಾ ನಿಷೇದಿಸಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸಂದಿಗ್ದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡದೆ ಏಕಾಏಕಿ ಗುಟ್ಕಾ ನಿಷೇಧದ ಮೂಲಕ ಅಡಕೆ ಬೆಳೆಗಾರರಿಗೆ ಮಾರಣಾಂತಿಕ ಪ್ರಹಾರಕ್ಕೆ ಸಿದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಈಗಾಗಲೇ ಗುಟ್ಕಾ ನಿಷೇಧಿಸುವಂತೆ ಆದೇಶಿಸಿದ್ದರೂ ಸರ್ಕಾರ ಬೆಳೆಗಾರರ ಹಿತರಕ್ಷಣೆಗೆ ಪರ್ಯಾಯ ಮಾರ್ಗ ಆಲೋಚಿಸಿ ಗುಟ್ಕಾ ನಿಷೇಧಿಸುವ ಮೂಲಕ ಲಕ್ಷಾಂತರ ಯುವ ಪೀಳಿಗೆಯ ಜತೆಗೆ ಬೆಳೆಗಾರರ ಹಿತವನ್ನು ಕಾಪಾಡುವ ಎಲ್ಲಾ ಕ್ರಮ ಕೈಗೊಳ್ಳಬೇಕಾಗಿದೆ ಎಂದ ಅವರು ಇದರೊಂದಿಗೆ ಗುಟ್ಕಾಕ್ಕಿಂತ ಅತ್ಯಂತ ಅಪಾಯಕಾರಿಯಾದ ಮದ್ಯ ಮಾರಾಟ ತಕ್ಷಣ ನಿಷೇಧಿಸಿ ಬಡಜನತೆಯನ್ನು ಕಾಪಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಕೂಡಲೇ ಅಡಕೆ ಬೆಳೆಗಾರರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೊಳಿಸಿ ಮಾರಾಟಗಾರರಿಗೆ ನಿರ್ದಿಷ್ಟ ಕಾಲಾವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ನಂತರ ಮುನ್ನೆಚ್ಚರಿಕೆ ನೀಡದೆ ಗುಟ್ಕಾ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಯೋಗೀಶ್ ಬೆಂಕಿ, ಗಿರೀಶ್ ಧಾರವಾಡದ, ಆರ್. ಜಯಣ್ಣ, ಸುರೇಶ್ ಬೇವೂರು, ಮಲ್ಲಾಪುರ ಪ್ರಕಾಶ್, ಕಲವತ್ತಿ ನಾಗರಾಜ್,ಪ್ರಭಾಕರ್, ಮೂರ್ತಿ ಇದ್ದರು.