ಡೆಂಘೀ ತಡೆಗೆ ಸ್ವಚ್ಛತೆ ಅಗತ್ಯ: ಡಾ.ಕೃಷ್ಣಮೂರ್ತಿ ಅಭಿಮತ
ಕ.ಪ್ರ.ವಾರ್ತೆ, ಜೋಗ್ಫಾಲ್ಸ್, ಜೂ.5 ರಾಜ್ಯಾದ್ಯಂತ ಭೀಕರ ಭಯ ಸೃಷ್ಟಿಸಿರುವ ಡೆಂಘೀ ಬಗ್ಗೆ ಎಚ್ಚರ ವಹಿಸುವುದರ ಜೊತೆಗೆ ಮನೆಯ ಆವರಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಕೆ.ಪಿ.ಸಿ. ವೈದ್ಯಾಧಿಕಾರಿ ಡಾ. ಡಿ.ಟಿ. ಕೃಷ್ಣಮೂರ್ತಿ ತಿಳಿಸಿದರು.
ಅವರು ಇಲ್ಲಿನ ಜೋಗ್ ಕಾರ್ಗಲ್ ಪಪಂ ಆವರಣದಲ್ಲಿ ಡೆಂಘೀ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೀರು ನಿಲ್ಲದಿರಲಿ: ಸಾಮಾನ್ಯವಾಗಿ ಮನೆಯ ಸುತ್ತಮುತ್ತಲಿನ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಲ್ಲದೇ ವಾರಕ್ಕೊಮ್ಮೆ ಟ್ಯಾಂಕ್ಗಳಲ್ಲಿ ತುಂಬಿರುವ ನೀರನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಸೊಳ್ಳೆ ನಿಂತು ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು. ಈಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಘೀ ಉಂಟಾಗುತ್ತದೆ. ಸೊಳ್ಳೆ ಕಚ್ಚಿದ 5 ರಿಂದ 7 ದಿನಗಳ ನಂತರ ರೋಗದ ಪ್ರಾಥಮಿಕ ಲಕ್ಷಣ ಕಂಡುಬರುತ್ತದೆ ಎಂದು ತಿಳಿಸಿದರು.
ಜೋಗ್ ಕಾರ್ಗಲ್ ಪಪಂ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ, ಮುಖ್ಯಾಧಿಕಾರಿ ಎಂ.ಜಿ. ರಮೇಶ್, ಸರ್ಕಾರಿ ಪ್ರಾಥಮಿಕ ವೈದ್ಯಾಧಿಕಾರಿ ಡಾ. ಪ್ರದೀಪ್, ಪಪಂ ಸದಸ್ಯ ಎಂ. ರಾಜು, ರವಿ ಲಿಂಗನಮಕ್ಕಿ ಮೊದಲಾದವರು ಹಾಜರಿದ್ದರು.
ಪಪಂ ಪ್ರಭಾರ ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ಮೂರ್ತಿ ಸ್ವಾಗತಿಸಿ, ನಿರೂಪಿಸಿದರು. ಶಿವಾಜಿರಾವ್ ವಂದಿಸಿದರು.