ನಿಷೇಧ ಏಕ ಪಕ್ಷೀಯ ನಿರ್ಧಾರ: ಆರೋಪ
ಶಿವಮೊಗ್ಗ: ರಾಜ್ಯದ ಅಡಕೆ ಬೆಳೆಗಾರರ ಹಿತ ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಗುಟ್ಕಾ ಮಾರಾಟ ನಿಷೇಧ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಶಿವಮೊಗ್ಗ ಜಿಲ್ಲಾ ವರ್ತಕರ ಸಂಘ ಖಂಡಿಸಿದೆ.
ತುಮ್ಕೋಸ್, ಮ್ಯಾಮ್ಕೋಸ್, ಕ್ಯಾಂಪ್ಕೋ, ಟಿಎಸ್ಎಸ್, ಆಪ್ಕೋಸ್ ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಅಡಕೆ ಬೆಳೆಗಾರರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ನೌಕರರು ಜೀವನ ನಡೆಸುತ್ತಿದ್ದಾರೆ. ಗುಟ್ಕಾ ಮಸಾಲ, ಪಾನ್, ಮಸಲಾ, ಆರ್ಎಂಡಿ ಉತ್ಪಾದಿಸುವ ಲಕ್ಷಾಂತರ ಗುಟ್ಕಾ ಕಂಪನಿಗಳು, ಅದರ ಮಾಲೀಕರು, ಅವಲಂಬಿತ ಕೋಟ್ಯಂತರ ಕುಟುಂಬಗಳು ಇಂದು ಬೀದಿಗೆ ಬೀಳುವಂತಾಗಿದೆ. ಈ ಸಂಬಂಧವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಣಕಪುರ ಎಂಬ ಗ್ರಾಮದ ಗುಟ್ಕಾ ಕಂಪನಿ ಕಾರ್ಮಿಕ ಶಾಹೀದ್ ಯಡವಣ್ಣ ಸೀಮೆಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು.ಈ ಘಟನೆ ನಾಗರಿಕ ಸಮಾಜವೇ ತಲೆಕಗ್ಗಿಸುವಂತಾಗಿದೆ.
ಸರ್ವಾಧಿಕಾರ ಧೋರಣೆ: 1995ರ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ದಿದ್ದು, ನರಸಿಂಹಯ್ಯ ಆಯೋಗವನ್ನು ರಚನೆ ಮಾಡಿ, ಅದರ ಸಾಧಕ- ಬಾಧಕ ಪರಿಣಾಮಗಳ ಬಗ್ಗೆ ವರದಿ ನೀಡಿದ್ದರು. ಆದರೆ, ಇದೀಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅಡಕೆ ಬೆಳೆಗಾರರ, ಕಾರ್ಮಿಕರ, ವರ್ತಕರ ವೈಯಕ್ತಿಕ ಅಹವಾಲುಗಳನ್ನು ಆಲಿಸದೇ, ಚರ್ಚಿಸದೇ ಏಕಪಕ್ಷೀಯವಾಗಿ ಗುಟ್ಕಾ ರದ್ದು ಮಾಡಿರುವುದು ಅವರ ಸರ್ವಾಧಿಕಾರ ಧೋರಣೆಯನ್ನು ತೋರಿಸುತ್ತದೆ ಎಂದು ಸಂಘ ಆರೋಪಿಸಿದೆ.
800 ಕೋಟಿ ವಹಿವಾಟು: ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಬೆಳೆಯೊಂದರಲ್ಲಿಯೇ ವಹಿವಾಟು ವಾರ್ಷಿಕವಾಗಿ 800 ಕೋಟಿ ರುಪಾಯಿಗೂ ಅಧಿಕವಾಗಿದೆ. ಗುಟ್ಕಾ ವಹಿವಾಟಿಗೆ ಸಂಬಂಧಿಸಿದಂತೆ ಶೇ.30 ರಷ್ಟು ವ್ಯಾಟ್ ತೆರಿಗೆಯನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಸೊರಬ, ಹೊಸನಗರ, ಭದ್ರಾವತಿ, ಶಿವಮೊಗ್ಗ ಸೇರಿದಂತೆ ಪ್ರತಿನಿತ್ಯ ಕೋಟ್ಯಂತರ ರುಪಾಯಿಗಳ ಅಡಕೆ ವಹಿವಾಟು ನಡೆಯುತ್ತಿದೆ. ಶಿವಮೊಗ್ಗ ನಗರದಲ್ಲಿಯೇ ಸುಮಾರು 200 ಕ್ಕೂ ಅಧಿಕ ಅಡಕೆ ಮಂಡಿಗಳಿದ್ದು, ಸಾವಿರಾರು ವರ್ತಕರು, ಕಾರ್ಮಿಕರು ಜೀವನೋಪಾಯ ಕಂಡುಕೊಂಡಿದ್ದಾರೆ.
ಸರ್ಕಾರ ಗಮನಿಸಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 60 ರಷ್ಟು ಅಡಕೆ ಬೆಳೆಗಾರರಿದ್ದು, ದೇಶದ ನಾನಾ ರಾಜ್ಯಗಳಿಗೆ ಶೇ. 65 ರಷ್ಟು ಶ್ರೇಷ್ಟಮಟ್ಟದ ಅಡಕೆ ರಫ್ತಾಗುತ್ತಿದೆ. ಅಡಕೆ ಆ ಭಾಗದ ಜನರ ಜೀವನಾಡಿಯಾಗಿರುವುದನ್ನು ರಾಜ್ಯ ಸರ್ಕಾರ ಗಮನಿಸಲಿ, ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುವ ಬಗ್ಗೆಯೂ ಸರ್ಕಾರ ಯೋಚಿಸಬೇಕಿತ್ತು ಎಂದು ಸಂಘ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡಿರುವ ತೀರ್ಮಾನ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೇ, ತೆರೆಮರೆಯಲ್ಲಿ ಲಾಭಿಗಳನ್ನು ಮಾಡಿತ್ತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಗುಟ್ಕಾ ನಿಷೇಧದ ಸಾಧಕ- ಬಾಧಕಗಳ ಬಗ್ಗೆ ವರ್ತಕರನ್ನು ಮಾತುಕತೆಗೆ ಕರೆಯಬೇಕು, ಪರ್ಯಾಯ ಬೆಳೆಗೆ ಕಾಲಾವಕಾಶ ನೀಡಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಸಂಘದ ಪರವಾಗಿ ಎಚ್.ವಿ. ಪಂಚಾಕ್ಷರಪ್ಪ ಎಚ್ಚರಿಸಿದ್ದಾರೆ.