ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪರಿಸರ ಮಾಲಿನ್ಯ: ಮಕ್ಕಳಲ್ಲಿ ಅರಿವು ಮೂಡಿಸಿ

Lingaraj Badiger
Updated On : 6 Jun 2013, 10:54 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.5
ಪರಿಸರ ಪೂರಕ ಜೀವನ ಮತ್ತು ಮಾಲಿನ್ಯದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಅವರನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದರು.
ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷತಾ ಕೇಂದ್ರ ಹಾಗೂ ಜೆಎನ್‌ಎನ್‌ಸಿಇ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವ್ಯಾಹತ ದಾಳಿ: ಮನುಷ್ಯ ಪರಿಸರದ ಮೇಲೆ ಮಾಡುತ್ತಿರುವ ಅವ್ಯಾಹತ ದಾಳಿಯಿಂದಾಗಿ ಪರಿಸರ ನಾಶದಂಚಿಗೆ ಬಂದು ನಿಂತಿದೆ. ಅಲ್ಲದೆ, ಪರಿಸರದ ಅಸಮತೋಲನದಿಂದಾಗಿ ಭವಿಷ್ಯದ ದಿನಗಳಲ್ಲಿ ಸಂಭವಿಸುವ ಪ್ರಾಕೃತಿಕ ಅವಘಡಗಳಿಂದ ತಪ್ಪಿಸಿಕೊಳ್ಳಲು ಪರಿಸರದ ಬಗ್ಗೆ ನಿರಂತರ ಕಾಳಜಿ ವಹಿಸಬೇಕೆಂದರು.
ಜನಸಂಖ್ಯೆಯಲ್ಲಿ ಹೆಚ್ಚಳ: ಸಮಾಜದ ಎಲ್ಲರೂ ನೆಮ್ಮದಿಯಿಂದ, ಆರೋಗ್ಯವಂತರಾಗಿ, ದೀರ್ಘಾಯುಷಿಗಳಾಗಿ ಬದುಕಲು ಹಾಗೂ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರವನ್ನು ಉಳಿಸಿಕೊಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದ ಅವರು ಕ್ಷಿಪ್ರಗತಿಯಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆದರೆ ಭೂಮಿಯಲ್ಲಿ ಸೀಮಿತ ಪ್ರದೇಶಕ್ಕಿಂತ ಹೆಚ್ಚಳ ಪ್ರದೇಶ ದೊರೆಯದು. ಆದ್ದರಿಂದ ಇರುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಬಳಸಿಕೊಳ್ಳುವುದು ಜಾಣತನ ಎಂದರು.
ಅರಿವು ಮೂಡಿಸಿ: ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕುಮಾರ್ ಮಾತನಾಡಿ, ಶಾಲಾ ಮಕ್ಕಳಲ್ಲಿ ನಮ್ಮ ಜೀವ ಮತ್ತು ಜೀವನಕ್ಕೆ ಅಗತ್ಯವಾದ ನೆಲ, ಜಲ, ಗಾಳಿ ಮತ್ತು ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ಇದರೊಂದಿಗೆ ಪ್ರಥಮ ಆದ್ಯತೆಯಾಗಿ ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಿಡ ನೆಟ್ಟು ಉಳಿಸಿ ಬೆಳಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಿಡ್ಸ್ ಮತ್ತು ಜ್ಞಾನಸಾಗರ ಟ್ರಸ್ಟ್ ಅಧ್ಯಕ್ಷ ಸಿ.ಎಸ್. ಚಂದ್ರಶೇಖರ್, ಹಿರಿಯ ನಾಗರಿಕ ತಿಮ್ಮಪ್ಪ, ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಧ್ಯಾಪಕ ಡಾ.ಎಲ್.ಕೆ. ಶ್ರೀಪತಿಯವರು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಆರಂಭದಲ್ಲಿ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವೈ.ಎಸ್. ಹರಿಶಂಕರ್ ವಂದಿಸಿದರು.
ಪರಿಸರ ರಕ್ಷಿಸಿ
ಶಿವಮೊಗ್ಗ: ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಮನೆಗಳ ಮುಂದೆ ಗಿಡ ಮರಗಳನ್ನು ಬೆಳೆಸಿ, ಪೋಷಿಸುವ ಕಾರ್ಯವನ್ನು ಕೈಗೊಂಡಾಗ ಮಾತ್ರ ವಿಶ್ವ ಪರಿಸರ ದಿನಾಚರಣೆ ಹೆಚ್ಚು ಅರ್ಥಬದ್ಧವಾಗಿ ಮಾಡಲು ಸಾಧ್ಯ ಎಂದು ಆಯನೂರು ವಲಯದ ಉಪವಲಯ ಅರಣ್ಯಾಧಿಕಾರಿ ಎಚ್. ರಾಮನಾಯ್ಕ ಹೇಳಿದರು.
ಆಯನೂರು ವಲಯದ ನರ್ಸರಿಯಲ್ಲಿ ಅರಣ್ಯ ಇಲಾಖೆ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಗ್ರಾಮ ಅರಣ್ಯ ಸಮಿತಿಗಳ ಒಕ್ಕೂಟ, ಪತಂಜಲಿ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದ ಮಹತ್ವ: ಒಕ್ಕೂಟದ ಅಧ್ಯಕ್ಷೆ ವನಿತಾ ಮಾತನಾಡಿ ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯ ಜೊತೆ ಪ್ರತಿಯೊಬ್ಬರು ಕೈಜೋಡಿಸುವ ಪ್ರತಿಜ್ಞೆ ಮಾಡಿದಾಗ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವುದರಲ್ಲಿ ಅರ್ಥವಿರುತ್ತದೆ ಎಂದು ಪರಿಸರದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಾರಣ್ಯ ಸಮಿತಿ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಸಿಂಗನಹಳ್ಳಿರಾಗಿಹೊಸಳ್ಳಿ ಮಲ್ಲೇಶ್ವರ ಗ್ರಾಮ ಅರಣ್ಯ ಸಮಿತಿಯ ಸ್ವಯಂಸೇವಕ ಪಾಲಾಕ್ಷಿ ವಹಿಸಿದ್ದರು. ಉಷಾ ಪ್ರಾರ್ಥಿಸಿದರು. ಬಸಪ್ಪ ಸ್ವಾಗತಿಸಿದರು. ಮಮತಾ ವಂದಿಸಿದರು. ಅನುಸೂಯ ಕಾರ್ಯಕ್ರಮ ನಿರೂಪಿಸಿದರು.
ಪರಿಸರಕ್ಕೆ ನ್ಯಾಯ ದೊರಕಿಸಿ: ಶೆಟ್ಟರ್
ಶಿವಮೊಗ್ಗ: ಪ್ರತಿವರ್ಷ ನಾವೆಲ್ಲರೂ ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೆ ನಿರಂತರವಾಗಿ ಆಚರಿಸಿದಾಗ ಮಾತ್ರ ಪರಿಸರಕ್ಕೆ ನ್ಯಾಯವನ್ನು ದೊರಕಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಶೆಟ್ಟರ್ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆಯ ನ್ಯಾಯಾಧೀಶರ ವಸತಿ ಸಮುಚ್ಚಯದ ಸುತ್ತಮುತ್ತಲು ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ವಿಭಾಗದ ಉಪವಲಯ ಅರಣ್ಯಾಧಿಕಾರಿ ಕೆ.ವಿ. ಮಲ್ಲಿಕಾರ್ಜುನ ಮಾತನಾಡಿ, ಮರ ಗಿಡಗಳನ್ನು ಬೆಳೆಸಿ ರಕ್ಷಿಸುವುದು ಅರಣ್ಯ ಇಲಾಖೆಯ ಜೊತೆಗೆ ಅದರ ಪೋಷಣೆಗೆ ಪ್ರತಿಯೊಬ್ಬರು ಮುಂದೆ ಬರಬೇಕು ಎಂದರು.
ಎಸಿಎಫ್ ಅಬ್ದುಲ್ ರವೂಫ್ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಅರಣ್ಯ ಸಂಪತ್ತು ಇಂದು ಮನುಷ್ಯನ ಅತಿ ಆಸೆಗೆ ಬಲಿಯಾಗುತ್ತಿದೆ. ಸಸಿ ನೆಡುವ ಜವಾಬ್ಧಾರಿ ಪ್ರತಿಯೊಬ್ಬರ ಮೇಲಿದೆ ಎಂದರು.  
ನ್ಯಾಯಾಧೀಶ ಸಾವಿತ್ರಿ ಎಸ್.ವಿನಾಯಕ್, ನಂಜುಂಡಸ್ವಾಮಿ, ಕುರುವಟ್ಟಿ, ರಾಜಶೇಖರ್, ಕೆ. ಸುಬ್ರಮಣ್ಯ, ಇಂದಿರಾ ಮೈಲ್‌ಸ್ವಾಮಿ ಚಟ್ಟಿಯಾರ್, ವಾಣಿ ಶೆಟ್ಟಿ, ವಿಜಯ ಕುಮಾರ್ ರಾಯ್, ಪೂರ್ಣಿಮಾ, ಅರುಣ ಕುಮಾರಿ, ಗುರುರಾಜ್  ಇದ್ದರು.
ಹೆಚ್ಚುತ್ತಿದೆ ಉಷ್ಣಾಂಶ
ಶಿವಮೊಗ್ಗ: ಇಂದು ಭೂಮಂಡಲ ಎಂದೂ ಇಲ್ಲದಷ್ಟು ಉಷ್ಣತೆಯಿಂದ ಕೂಡಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ತಾಪಮಾನದಿಂದ ಜನ ಶಾಪಹಾಕುವಂತಾಗಬಾರದು ಎಂದು ಸ್ವಾತಂತ್ರ ಸೇನಾನಿ ಡಾ. ಚಿಕ್ಕಸ್ವಾಮಿ ತಿಳಿಸಿದ್ದಾರೆ.
ಪರಿಸರ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯವರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಕೇವಲ ಪ್ರಚಾರದ ದೃಷ್ಟಿಯಿಂದ ಮಾಡದೆ ನೈಜ ಅರ್ಥದಲ್ಲಿ ನಡೆಯಬೇಕು ಎಂದು ತಿಳಿಸಿದರು. ಕೇವಲ ಸಸಿ ನೆಟ್ಟರೆ ಸಾಲದು ಅದನ್ನು ಪೋಷಿಸಿ ಬೆಳಸಬೇಕೆಂದು ಅಲ್ಲಿನ ನಿವಾಸಿಗಳಿಗೆ ಇದೇ ಸಂದರ್ಭದಲ್ಲಿ ಕರೆನೀಡಿದರು.
ಹಿರಿಯ ವೈದ್ಯ ಡಾ.ಎನ.ಎಲ್. ನಾಯಕ್ ಅವರು ಸಸಿ ನೆಡುವುದರ ಮೂಲಕ ಪರಿಸರ ಕಾಳಜಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಮನುಷ್ಯನಿಗೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವ ಮರಗಿಡಗಳು ನಮ್ಮ ಬದುಕಿನ ಜೀವಾಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ನಾಗರಿಕ  ವೇದಿಕೆ ಅಧ್ಯಕ್ಷ ವಸಂತ ಕುಮಾರ್ ಮಾತನಾಡಿದರು. ಸತೀಶ್ ಕುಮಾರ್ ಶೆಟ್ಟಿ, ಅಶೋಕ್ ಯಾದವ್ , ಎಂ.ಎನ್. ಸುಂದರ ರಾಜ್, ನಗರಸಭಾ ಸದಸ್ಯ ಪಾಲಾಕ್ಷಿ, ರುದ್ರಪ್ಪ, ರೋಟರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ. ವಿಜಯಕುಮಾರ್. ಜೇಸಿ ಕಿರಣ್, ಜೇಸಿ ಸುರೇಶ್, ಜಯಲಕ್ಷ್ಮಿ, ಜಗನ್ನಾಥಯ್ಯ, ಚಂದ್ರು ರಾಮಮೂರ್ತಿ ಸುಬ್ರಹ್ಮಣ್ಯ, ಅ.ನಾ. ವಿಜಯೇಂದ್ರ ರಾವ್, ಅಶೋಕ ಕುಮಾರ್, ಆನಂದ್, ದಿವಾಕರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement