ಬೆಳೆಗಾರರೇ ಬೇಡ ಆತಂಕ
ಕ.ಪ್ರ. ವಾರ್ತೆ, ಶಿವಮೊಗ್ಗ, ಜೂ. 5
ಗುಟ್ಕಾ ನಿಷೇಧದ ನಂತರ ಅಡಕೆ ಬೆಳೆಗಾರರು ಕಂಗಾಲಾಗಿದ್ದರು. ಎಲ್ಲಿ ಬೆಲೆ ಪಾತಾಳಕ್ಕೆ ತಲುಪಿ ತಮ್ಮ ಬದುಕು ಮೂರಾಬಟ್ಟೆಯಾಗುತ್ತದೋ ಎಂಬ ತಲ್ಲಣ ಉಂಟಾಗಿತ್ತು. ಆದರೆ, ಸದ್ಯಕ್ಕಂತೂ ಬೆಳೆಗಾರರು ಆತಂಕ ಪಡುವ ಲಕ್ಷಣ ಕಂಡುಬಂದಿಲ್ಲ. ಅಡಕೆ ವಹಿವಾಟು ನಿರಾತಂಕವಾಗಿ ಸಾಗಿದ್ದು ಅಡಕೆಗೆ ಉತ್ತಮ ಬೆಲೆಯೇ ಸಿಗುತ್ತಿದೆ.
ಮೇ 30ರ ನಂತರ ಅಡಕೆ ಬೆಲೆ ಸರಾಸರಿ ಒಂದು ಸಾವಿರ ರುಪಾಯಿ ವರೆಗೆ ಇಳಿದಿದ್ದು ಬಿಟ್ಟರೆ ಅಷ್ಟಾಗಿ ಕುಸಿತ ಕಂಡುಬಂದಿಲ್ಲ ಎಂದು ಅಡಕೆ ವ್ಯಾಪಾರಸ್ಥರೇ ಹೇಳುತ್ತಾರೆ.
ಎಪಿಎಂಸಿ ಕಾರ್ಯದರ್ಶಿ ಶರಶ್ಚಂದ್ರ ರಾನಡೆ ಹೇಳುವಂತೆ, ಗುಟ್ಕಾ ನಿಷೇಧದ ನಂತರವೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಕೆ ಮಾರಾಟ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ವಹಿವಾಟು ಮಾತ್ರ ಕಡಿಮೆಯಾಗಿದೆ.
ಮಾರುಕಟ್ಟೆಯಲ್ಲಿ ಏನಾಯ್ತು: ರಾಜ್ಯದಲ್ಲಿ ಗುಟ್ಕಾ ನಿಷೇಧಕ್ಕಿಂತ ಮುಂಚೆ ಇದ್ದ ಬೆಲೆಗೂ ಈಗಿನ ಬೆಲೆಗೂ ಅಂತಹ ವ್ಯತ್ಯಾಸವಾಗಿಲ್ಲ.
ಗುಟ್ಕಾಗೆ ಬಳಕೆಯಾಗುವುದು ಬೆಟ್ಟೆ ಮತ್ತು ಇಡಿ. ಈ ಎರಡು ಬಗೆಯ ಅಡಕೆಗೆ ಬೇಡಿಕೆ ಕಡಿಮೆಯಾಗಿಲ್ಲ. ಅಡಕೆಯಲ್ಲಿ ಪ್ರಧಾನವಾದ ಸರಕು ಸರಾಸರಿ 19 ಸಾವಿರ ಕನಿಷ್ಟ ಬೆಲೆಯನ್ನು ಉಳಿಸಿಕೊಂಡಿದೆ. ಗರಿಷ್ಠ ಬೆಲೆಯಲ್ಲಿ ಮಾತ್ರ ಕೊಂಚ ಇಳಿಕೆ ಕಂಡಿದೆ.
ಆದರೆ, ವಹಿವಾಟು ಮಾತ್ರ ಶೇ.50ಕ್ಕಿಂತ ಕಡಿಮೆಯಾಗಿದೆ. ದಿನವೊಂದಕ್ಕೆ ಸರಾಸರಿ 2000 ಕ್ವಿಂಟಾಲ್ ವಹಿವಾಟು ನಡೆದರೆ, ಗುಟ್ಕಾ ನಿಷೇಧದ ನಂತರದ ಬೆಳವಣಿಗೆಯಲ್ಲಿ ದಿನವೊಂದಕ್ಕೆ 500ರಿಂದ 600 ಕ್ವಿಂಟಾಲ್ನಷ್ಟು ಮಾತ್ರ ಅಡಕೆ ಖರೀದಿಯಾಗುತ್ತಿದೆ.
ಪ್ರಮುಖ ಸಹಕಾರ ಸಂಸ್ಥೆ, ಖರೀದಿದಾರರು ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. ಆದರೆ, ಖರೀದಿ ಮಾತ್ರ ನಿರಾತಂಕವಾಗಿ ಸಾಗಿದೆ. ಇನ್ನೊಂದು ಅಚ್ಚರಿ ಎಂದರೆ ಬೆಲೆಯೂ ಇಳಿಕೆಯಾಗಿಲ್ಲ. ಮಂಗಳವಾರ ಸರಕು ಹೊರತುಪಡಿಸಿ ಉಳಿದೆಲ್ಲಾ ಪ್ರಕಾರದ ಅಡಕೆ ಬೆಲೆಯಲ್ಲಿ ಕೊಂಚ ಏರಿಕೆಯೇ ಆಗಿದೆ.
ಅಡಕೆ ಹೊರ ರಾಜ್ಯಕ್ಕೆ: ರಾಜ್ಯದಲ್ಲಿ ಗುಟ್ಕಾ ನಿಷೇಧದ ನಂತರ ರಾಜ್ಯದೊಳಗಿನ ಗುಟ್ಕಾ ತಯಾರಿಕಾ ಕಂಪನಿಗಳ ಚಟುವಟಿಕೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯಕ್ಕಷ್ಟೇ ಅಡಕೆ ರಫ್ತಾಗುತ್ತಿದೆ ಎಂಬುದು ಪ್ರಮುಖ ಅಡಕೆ ಮಂಡಿ ಮಾಲಿಕರೊಬ್ಬರ ವಿವರಣೆ.
ಇನ್ನೊಂದು ವಿಶೇಷ ಸಂಗತಿ ಎಂದರೆ, ಯಾವ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇದೆ ಎಂಬುದರ ಮಾಹಿತಿಯನ್ನು ಯಾವುದೇ ಪ್ರಮುಖ ಅಡಕೆ ಮಂಡಿ ವರ್ತಕರು ಬಿಟ್ಟು ಕೊಡುತ್ತಿಲ್ಲ.
ಎಪಿಎಂಸಿ ಅಧಿಕಾರಿಗಳ ಮಾಹಿತಿಯಂತೆ ತಮಿಳುನಾಡು, ಗುಜರಾತ್ ಮತ್ತು ಉತ್ತರ ಪ್ರದೇಶ ಕಡೆಯಿಂದ ಒಟ್ಟಾರೆ ಬೇಡಿಕೆ ಇದ್ದು, ಈ ದಿಕ್ಕಿನತ್ತಲೇ ಅಡಕೆ ಸರಬರಾಜಾಗುತ್ತಿದೆ.
--