ವ್ಯಂಗ್ಯಚಿತ್ರಕಾರರ ಕಾರ್ಯಾಗಾರ
ಶಿವಮೊಗ್ಗ: ಗ್ರಾಮೀಣ ಭಾಗದ ಯುವ ವ್ಯಂಗ್ಯ ಚಿತ್ರಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ವ್ಯಂಗ್ಯಚಿತ್ರಕಾರರ ಕಾರ್ಯಾಗಾರ ತೀರ್ಥಹಳ್ಳಿ ತಾಲೂಕು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನದಲ್ಲಿ ಜೂನ್ 7ರಿಂದ 9ರವರೆಗೆ ನಡೆಯಲಿದೆ.
ಈ ಕಾರ್ಯಾಗಾರಕ್ಕಾಗಿ ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಈಗ ರಂಗ ಸಜ್ಜಾಗಿದೆ. ರಾಜ್ಯದ ಎಲ್ಲಡೆಯಿಂದ ಸುಮಾರು 70 ಮಂದಿ ಯುವ ವ್ಯಂಗ್ಯಚಿತ್ರಕಾರರು ಭಾಗವಹಿಸಲಿದ್ದಾರೆ. ಆರು ಮಂದಿ ಅನುಭವಿ ವ್ಯಂಗ್ಯ ಚಿತ್ರಕಾರರು ಯುವ ಪ್ರತಿಭೆಗೆ ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಈಗ ಮೂವತ್ತರ ಸಂಭ್ರಮ. ಈ ಹಿನ್ನೆಲೆಯಲ್ಲಿ ವ್ಯಂಗ್ಯಚಿತ್ರಕಾರರ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಒಂದು ವಿಶೇಷ.
ವಿನೂತನ ಮಾದರಿಯ ಮೂರು ದಿನಗಳ ಈ ಕಾರ್ಯಾಗಾರವನ್ನು ಜೂನ್ 7ರಂದು ಕರ್ನಾಟಕ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಉದ್ಘಾಟಿಸಲಿದ್ದಾರೆ. ನಾಡೋಜ ಪ್ರೊ..ಹಂಪ ನಾಗರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಹೆಸರಾಂತ ವ್ಯಂಗ್ಯಚಿತ್ರಕಾರ ಬಿ.ಜಿ. ಗುಜ್ಜಾರಪ್ಪ ಹಾಗೂ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ಎಸ್.ವಿ. ಪದ್ಮನಾಭ ಮುಖ್ಯ ಅತಿಥಿಗಳಾಗಿರುತ್ತಾರೆ.
ಕಾರ್ಯಾಗಾರದ ಎರಡನೇ ದಿನವಾದ ಜೂನ್ 8ರಂದು ನಡೆಯುವ ಕರ್ನಾಟಕದಲ್ಲಿ ವ್ಯಂಗ್ಯಚಿತ್ರ ಕಲೆ ವಿಚಾರ ಸಂಕಿರಣವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು.