'ಆಧ್ಯಾತ್ಮ ವ್ಯಕ್ತಿ ವಿಕಾಸಕ್ಕೆ ಅಡಿಗಲ್ಲು'
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.6
ಮಾನವನ ಬದುಕು ವಿಕಾಸಗೊಳ್ಳಬೇಕು. ಆಧ್ಯಾತ್ಮದ ಅರಿವು ವ್ಯಕ್ತಿಯ ವಿಕಾಸಕ್ಕೆ ಅಡಿಗಲ್ಲು. ಅಂತರಂಗ ಬಹಿರಂಗ ಶುದ್ಧಿಗೊಳಿಸುವುದೇ ವೀರಶೈವ ಧರ್ಮದ ಗುರಿ ಎಂದು ಎಂದು ಬಾಳೆಹೊನ್ನೂರು ಶ್ರಿ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ನಗರದ ವೀರಶೈವ ಕಲ್ಯಾಣ ಮಂದಿರದ ಶ್ರೀ ಎಸ್. ನಿಜಲಿಂಗಪ್ಪ ಸಭಾ ಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ 19ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಮತ್ತು ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಲಿಂಗಬೆಳಗಿನ ಅಮೃತ ಮಹೋತ್ಸವ ಪಂಚಾಚಾರ್ಯ ದೀಪ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಹಕಾರಿ: ನದಿ ಎಷ್ಟೇ ದೂರ ಹರಿದು ಹೋಗಿದ್ದರೂ ಮನುಷ್ಯ ಎಷ್ಟೋ ಭೌತಿಕವಾಗಿ ಬೆಳೆದರೂ ತನ್ನ ಆದರ್ಶ ಸಂಸ್ಕೃತಿ ಪರಂಪರೆಯನ್ನು ಮರೆಯಬಾರದು. ಹೊಸ ಕೊಂಬೆಗಳು ಬೇಡ ಎನ್ನುವುದು ಎಷ್ಟು ಅನುಚಿತವೋ ಹಳೆಯ ಬುಡ ಬೇಡ ಎನ್ನುವುದು ಅಷ್ಟೇ ಅನುಚಿತ. ಇವೆರಡೂ ಇದ್ದಾಗ ಮಾತ್ರ ಮರ ಸಮೃದ್ಧವಾಗಿ ಕಾಣುತ್ತದೆ. ಅದೇ ರೀತಿ ಪ್ರಾಚೀನ ವಿಚಾರಗಳ ಜೊತೆಗೆ ಆಧುನಿಕತೆಯ ಚಿಂತನೆಗಳು ಬಾಳ ಬೆಳಕಿಗೆ ಸಹಕಾರಿಯಾಗಬಲ್ಲವು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಸಾಧ್ಯವೆಂದರು.
ಬಿಳಕಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಪಂಚಾಚಾರ್ಯರ ಪರಂಪರೆ ಹಾಗೂ ಸಿದ್ಧಲಿಂಗ ಜಗದ್ಗುರುಗಳು ವಿಷಯವಾಗಿ ಮತ್ತು ತಾವರೆಕೆರೆಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ವೀರಶೈವ ಸಂಸ್ಕಾರಗಳು ವಿಷಯವಾಗಿ ಮಾತನಾಡಿದರು.
ವೀರಶೈವ ಕಲ್ಯಾಣ ಮಂದಿರದ ಗೌರವ ಕಾರ್ಯದರ್ಶಿ ಎನ್.ಜೆ. ರಾಜಶೇಖರ್ ಸುಭಾಷ್ ಅವರು ಮಾತನಾಡಿದರು.