ಬಿತ್ತನೆ ಬೀಜ, ರಸಗೊಬ್ಬರಕ್ಕೆ ದುಪ್ಪಟ್ಟು ಬೆಲೆ: ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ ಸೊರಬ ಜೂ.6
ತಾಲೂಕಿನಲ್ಲಿ ಈಗಾಗಲೇ ಮುಂಗಾರು ಉತ್ತಮ ಆರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರಗಳಿಗೆ ಭಾರಿ ಬೇಡಿಕೆ ಬಂದಿದೆ. ರೈತರು ದುಪ್ಪಟ್ಟು ಬೆಲೆ ಕೊಟ್ಟು ತೆಗೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಜಡೆ ಹೋಬಳಿ ಸೂರಣಿಗೆ ಸುತ್ತಮುತ್ತಲ ಗ್ರಾಮಸ್ಥರುಆರೋಪಿಸಿದ್ದಾರೆ.
ಸೂರಣಿಗೆ ಗ್ರಾಮದಲ್ಲಿ ನಡೆದ ಜನಸ್ಪಂಧನಾ ಸಭೆಯಲ್ಲಿ ತಮ್ಮ ಅಸಹನೆ ವ್ಯಕ್ತಪಡಿಸಿದ ಗ್ರಾಮಸ್ಥರು, ಇಂತಹ ಮಾರಾಟ ಕೇಂದ್ರಗಳ ವಿರುದ್ಧ ಕೃಷಿ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ವೈದ್ಯರನ್ನು ನೇಮಿಸಿ: ಜಡೆ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2-3 ತಿಂಗಳಿನಿಂದ ವೈದ್ಯರಿಲ್ಲ. ಈ ಬಗ್ಗೆ ಹಲವು ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಆರೋಗ್ಯ ಕೇಂದ್ರ ಮುಚ್ಚಿ ಇಲ್ಲವೆ ವೈದ್ಯರನ್ನು ನೇಮಿಸಿ ಎಂದು ಒತ್ತಾಯಿಸಿದರು.
ಕೃಷಿ ಅಧಿಕಾರಿ ಬಿ.ಡಿ. ಮಂಜುಳ, ಇಲಾಖೆ ಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿದರು. ಭೂ ಚೇತನ ಕಾರ್ಯಕ್ರಮ ಮುಂದುವರೆದಿದೆ, ಖುಷ್ಕಿ ಪ್ರದೇಶದಲ್ಲಿ ಬೇಸಾಯ ತಾಂತ್ರಿಕತೆ ಅಳವಡಿಕೆ, ಉತ್ಪಾದಕತೆ ಹೆಚ್ಚಳದ ಈ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಬರಡಾಗುತ್ತಿರುವ ಖುಷ್ಕಿ ಜಮೀನಿಗೆ ತಾಂತ್ರಿಕ ಅಳವಡಿಕೆಯ ಪದರು ನೀಡಿ ವೇಗದ ಫಸಲಿನೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದರು.
ತಹಸೀಲ್ದಾರ್ ತೇಜಸ್ಕುಮಾರ್ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದರು, ಸರ್ಕಾರದ ಆದೇಶದಂತೆ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಈ ಸಭೆಗೆ ಗೈರಾಗುತ್ತಿರುವ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ತೆಲಗುಂದ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಸರೋಜಮ್ಮ, ರಾಜಪ್ಪ, ಶಿವಪುತ್ರಪ್ಪ, ತಾಪಂ ಅಧ್ಯಕ್ಷ ಸದಾನಂದಗೌಡ, ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ.ಕಮ್ಮಾರ್, ಅಬಕಾರಿ ಇನ್ಸ್ಪೆಕ್ಟರ್ ಮಮತಾ, ಆರ್.ಎಚ್. ರಜಪೂತ್, ಸಿಆರ್ಸಿ ರೇಣುಕಮ್ಮ, ಗ್ರಾಮಸ್ಥರು ಮೊದಲಾದವರು ಇದ್ದರು.