10ರಂದು ತಾಲೂಕು ಸಾಹಿತ್ಯ ಸಮ್ಮೇಳನ: ಭರದ ಸಿದ್ಧತೆ
ತೀರ್ಥಹಳ್ಳಿ: 10ರಂದು ನೆಡೆಯುವ ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳಕ್ಕೆ ಭರದ ಸಿದ್ಧತೆ ನೆಡೆಯುತ್ತಿವೆ.
ತಾಲೂಕಿನ ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಗೋಪಾಲಗೌಡ ರಂಗಮಂದಿರದ ಎಸ್.ವಿ. ಪರಮೇಶ್ವರ ಭಟ್ಟ ವೇದಿಕೆಯಲ್ಲಿ ನೆರವೇರಲಿದ್ದು ಸಮ್ಮೇಳನದ ಸಭಾಂಗಣಕ್ಕೆ ಬರಲು ಎರಡು ಮಹಾದ್ವಾರಗಳು ಸಾಹಿತ್ಯಾಸಕ್ತರನ್ನು ಸ್ವಾಗತಿಸಲಿವೆ. ತಾಲೂಕಿನ ಸಾಹಿತ್ಯ ದಿಗ್ಗಜ ಡಾ. ಹಾಮಾ ನಾಯಕ್ ಹಾಗೂ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿ ಹೆಸರಿನಲ್ಲಿ ಮಹಾದ್ವಾರಗಳು ತಯಾರಾಗುತ್ತಿವೆ.
ಕಡಿದಾಳು ಶಾಮಣ್ಣ: ಸಮ್ಮೇಳನದ ಸರ್ವಾಧ್ಯಕ್ಷ ಕೋಣಂದೂರು ಲಿಂಗಪ್ಪನವರ ನೇತೃತ್ವದಲ್ಲಿ ಕುಶಾವತಿ ಪಾರ್ಕಿನಿಂದ ಸಮ್ಮೇಳನದೆಡೆಗೆ ನಡಿಗೆ 10ರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು, ಕಡಿದಾಳು ಶಾಮಣ್ಣ ಚಾಲನೆ ನೀಡುವರು. ಎಸ್.ವಿ. ಪರಮೇಶ್ವರ ಭಟ್ಟ ವೇದಿಕೆಯ ಆವಣದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಸಚಿವ ಕಿಮ್ಮನೆ ರತ್ನಾಕರ್ ರಾಷ್ಟ್ರಧ್ವಜ, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ನಾಡಧ್ವಜ ಮತ್ತು ತಾಲೂಕು ಕಸಾಪ ಅಧ್ಯಕ್ಷ ಪರಿಷತ್ತಿನ ಧ್ವಜಾರೋಹಣ ನೆಡೆಸವರು. ನಂತರ ಕನ್ನಡ ಭವನದ ಶಂಕುಸ್ಥಾಪನೆ ನೆಡೆಯುವುದು.
ವ್ಯಂಗ್ಯಚಿತ್ರ ಪ್ರದರ್ಶನ: ಸಾಹಿತಿ ಕಾಳೇಗೌಡ ನಾಗವಾರ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ವ್ಯಂಗ್ಯಚಿತ್ರ ಪ್ರದರ್ಶನ, ಪುಸ್ತಕ ಮಳಿಗೆ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭನ್ನು ಅತಿಥಿಗಳು ನೆರವೇರಿಸುವರು. ನೆಂಪೆ ದೇವರಾಜ್ ಪ್ರಸ್ತಾವನೆ, ಹಾಗೂ ಡಾ.ಜೆ.ಕೆ. ರಮೇಶ್ ನಿಕಟಪೂರ್ವ ಅಧ್ಯಕ್ಷರ ನುಡಿಗಳನ್ನಾಡುವರು.
ಗೋಷ್ಠಿಗಳು: ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾಹಿತ್ಯ ಮತ್ತು ಚಳವಳಿ, ವಿಶ್ವ ಪಾರಂಪರಿಕ ತಾಣವಾಗಿ ಪಶ್ಚಿಮ ಘಟ್ಟ, ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ವಿಷಯವಾಗಿ ಪ್ರಜ್ಞೆ ಹೆಸರಿನಲ್ಲಿ ನೆಡೆಯುವ ಗೋಷ್ಠಿಯಲ್ಲಿ ಸರ್ಜಾ ಶಂಕರ್ ಹರಳೀಮಠ, ಡಾ. ಶಂಕರ ಶರ್ಮ, ಪುರ್ಣಿಮಾ ಹೇರಂಬಾಪುರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಡಾ.ಕೆ.ಸಿ. ಶಿವಾರೆಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಪ್ರತಿ ಸ್ಪಂದನ ಗೋಷ್ಠಿ ಡಾ.ಎಲ್.ಸಿ. ಸುಮಿತ್ರ ಅಧ್ಯಕ್ಷತೆಯಲ್ಲಿ ನೆರವೇರಲಿದೆ. ಶ್ರೀ ಕಲೀಮುಲ್ಲಾ, ಮುನ್ನೂರು ಮೋಹನ ಶೆಟ್ಟಿ, ಡಾ.ಬಿದರಗೋಡು ನಾಗೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಮಧ್ಯಾಹ್ನ 4 ರಿಂದ 6ರವರೆಗೆ ಕಾವ್ಯಧಾರೆ- ಕವಿಗೋಷ್ಠಿ ಕೃಷ್ಣ ಎಂ. ಜಾದವ್ ಅಧ್ಯಕ್ಷತೆಯಲ್ಲಿ ನೆರವೇರಲಿದೆ. ತಾಲೂಕಿನ ಹಿರಿ-ಕಿರಿ ಕವಿಗಳು ತಮ್ಮ ಕವನ ವಾಚಿಸಲಿದ್ದಾರೆ. ಸಂಜೆ ನೆಡೆಯುವ ಸಮಾರೋಪ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಡಾ.ಎಚ್.ಎಸ್. ನಾಗವೇಣಿ ಸಮಾರೋಪ ಭಾಷಣ ಮಾಡುವರು. ಸಚಿವ ಕಿಮ್ಮನೆ ರತ್ನಾಕರ್, ನಿವೃತ್ತ ಪ್ರಾಂಶುಪಾಲ ಕೆ. ಗಂಗಾಧರ್, ಚಿತ್ರಕಲಾವಿದ ಚಿ.ಸು. ಕೃಷ್ಣಶೆಟ್ಟಿ, ಸಾಹಿತಿ ಸಸಿತೋಟ ರವಿರನ್ನು ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭದ ನಂತರ ನೆಡೆಯುವ ಸಾಂಸ್ಕೃತಿಕ ಸಂಭ್ರಮಕ್ಕೆ ಹಿರಿಯ ರಂಗಕರ್ಮಿ ಯು. ಸೀತಾರಾಮಾಚಾರ್ ಚಾಲನೆ ನೀಡುವರು.