ಜಿಪಂ ಸಾಮಾನ್ಯ ಸಭೆ ಕರೆಯುವಂತೆ ಒತ್ತಾಯ
ಶಿವಮೊಗ್ಗ: ಸ್ಥಾಯಿ ಸಮಿತಿ ಸಭೆಗಳೆಲ್ಲಾ ಮುಗಿದಿದ್ದು, ಸಾಮಾನ್ಯ ಸಭೆಯನ್ನು ಕೂಡಲೇ ಕರೆಯುವಂತೆ ಜಿಲ್ಲಾ ಪಂಚಾಯ್ತಿ ವಿಪಕ್ಷ ನಾಯಕ ಕಲಗೋಡು ರತ್ನಾಕರ್ ಅವರು ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು 2 ತಿಂಗಳಿಗೊಮ್ಮೆ ನಡೆಸಬೇಕು. ಈ ಹಿಂದೆ ಫೆಬ್ರವರಿ 12 ಹಾಗೂ 13ರಂದು ಸಾಮಾನ್ಯ ಸಬೆ ನಡೆದಿತ್ತು. ಇದಾಗಿ 4 ತಿಂಗಳಾಗಿವೆ. ಚುನಾವಣೆ ಕಾರಣ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸ್ವಲ್ಪ ವಿಳಂಬವಾಗಿರಬಹುದು. ಚುನಾವಣೆ ನಂತರ ಈಗಾಗಲೇ 5 ಸ್ಥಾಯಿ ಸಮಿತಿಗಳ ಸಭೆಗಳು ಮುಗಿದಿವೆ.
ಸ್ಥಾಯಿ ಸಮಿತಿ ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಚರ್ಚಿಸಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಬೇಕಾಗಿದೆ ಎಂದರು.
ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡದ ಹೊರತು 2013-14ನೇ ಸಾಲಿಗೆ ವಿವಿಧ ಯೋಜನೆಗಳಡಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತದೆ. ಆದ್ದರಿಂದ ಕೂಡಲೇ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.