ಡೆಂಘೀ ವಿರುದ್ಧ ಸೂಕ್ತ ಎಚ್ಚರಿಕೆ ಅಗತ್ಯ: ಕೃಷ್ಣ
ಕ.ಪ್ರ.ವಾರ್ತೆ ಶಿಕಾರಿಪುರ ಜೂ.7
ತಾಲೂಕಿನ ಕೆಲ ಗ್ರಾಮದಲ್ಲಿ ಮಾರಕ ಡೆಂಘೀ ಮಹಾಮಾರಿಯಂತೆ ಹರಡುತ್ತಿದ್ದು, ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಸಹಿತ ವೃತ್ತಿ ಧರ್ಮವನ್ನು ಎತ್ತಿಹಿಡಿಯಬೇಕಾದ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ತಾಲೂಕು ಜಯಕರ್ನಾಟಕ ಅಧ್ಯಕ್ಷ ಕೃಷ್ಣ ಹುಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಾಲೂಕಿನಾದ್ಯಂತ ಡೆಂಘೀ ಸಹಿತ ವಿವಿಧ ಸಾಂಕ್ರಾಮಿಕ ಕಾಯಿಲೆ ತೀವ್ರವಾಗಿದ್ದು, ಅನಾರೋಗ್ಯಕ್ಕೆ ಸ್ಪಂದಿಸುವ ನೂತನ ವೈದ್ಯರ ನೇಮಕ ಸಹಿತ ಸ್ವಚ್ಛತೆ ಹಾಗೂ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯಕರ್ನಾಟಕದಿಂದ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆಯ ನೇತೃ ತ್ವ ವಹಿಸಿ ಅವರು ಮಾತನಾಡಿದರು.
ಹಣ ವಸೂಲಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಮಾರಕ ಮಹಾಮಾರಿ ಡೆಂಘೀ ವ್ಯಾಪಿಸುತ್ತಿದ್ದು, ಪಟ್ಟಣದ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದ್ದರೂ, ವೈದ್ಯರು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಚಿಕಿತ್ಸೆಗೆ ಕಳುಹಿಸುವ ಮೂಲಕ ಬಡ, ಅನಕ್ಷರಸ್ಥರಿಂದ ಹಣ ಸುಲಿಗೆಯಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.