ದುಬಾರಿ ಚಿಕಿತ್ಸೆ: ಬಡವರಿಗೆ ಹೊರೆ
ಕಪ್ರ ವಾರ್ತೆ ಶಿವಮೊಗ್ಗ ಜೂ. 7
ಮಣಿಪಾಲ್ ಆರೋಗ್ಯಕಾರ್ಡ್ ನೋಂದಣಿ ಹಾಗೂ ಮಾಹಿತಿ ಕೇಂದ್ರ ನಗರದ ಮಥುರಾ ಪ್ಯಾರಡೈಸ್ ಆವರಣದಲ್ಲಿ ಪ್ರಾರಂಭಗೊಂಡಿದೆ.
ಮಾಹಿತಿ ಕೇಂದ್ರದ ಪ್ರಚಾರ ಫಲಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಾಗರೀಕರ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯದರ್ಶಿ ಕೆ.ವಿ. ವಸಂತಕುಮಾರ್, ಮನುಷ್ಯನ ಒತ್ತಡಗಳ ನಡುವೆ ಆರೋಗ್ಯದ ಸಮಸ್ಯೆ ಉಂಟಾಗುವುದು ಇಂದು ಸಾಮಾನ್ಯವಾಗಿದೆ. ಆದರೆ, ಚಿಕಿತ್ಸೆ ದುಬಾರಿಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಹೊರೆಯಾಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮಣಿಪಾಲ್ನ ಕಸ್ತೂರಬಾ ಆಸ್ಪತ್ರೆಯ ಮಣಿಪಾಲ್ ಆರೋಗ್ಯಕಾರ್ಡ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು ಎಂದರು.
ಒಪಿಡಿ ತೆರೆಯಿರಿ: ಮಣಿಪಾಲ್ ಆಸ್ಪತ್ರೆಯವರು, ಶಿವಮೊಗ್ಗದಲ್ಲಿ ಓಪಿಡಿ ಕೇಂದ್ರವನ್ನು ತೆರೆದರೆ ಈ ಭಾಗದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು
ಆರೋಗ್ಯ ಕಷ್ಟ ಕಷ್ಟ: ಮಥುರಾ ಫುಡ್ ಪ್ರಾಡಕ್ಟ್ನ ಮಾಲೀಕರಾದ ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಮನುಷ್ಯ ಇಂದು ಜಂಜಾಟದಲ್ಲಿ ಬದುಕಿದ್ದಾನೆ. ಅನ್ನ, ಅಕ್ಷರ, ಆರೋಗ್ಯ ಕಾಪಾಡಿಕೊಳ್ಳುವುದೇ ಆತನಿಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಮಥುರಾ ಫುಡ್ ಪ್ರಾಡಕ್ಟ್ ಸಂಸ್ಥೆ ಆಹಾರ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೀಗ ಆರೋಗ್ಯ ಕ್ಷೇತ್ರಕ್ಕೂ ತನ್ನ ಕೊಡುಗೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಅನಿಲ್ ಪೌಲ್, ಮಣಿಪಾಲ್ ಆರೋಗ್ಯ ಕಾರ್ಡ್ ಮುಖ್ಯ ವಿತರಕ ಅ.ನಾ. ವಿಜಯೇಂದ್ರ ಇದ್ದರು.