ಪಡಿತರ ಚೀಟಿ: ಜನಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ
ಸೊರಬ: ಗ್ರಾಮಾಂತರ ಪ್ರದೇಶದವರು ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು 2010ರ ಹಿಂದಿನ ಪಡಿತರ ಚೀಟಿಗಳ ನವೀಕರಣದ ಬಗ್ಗೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಮಾಹಿತಿ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ತಹಸೀಲ್ದಾರ್ ತೇಜಸ್ ಕುಮಾರ್, ಆನ್ ಲೈನ್‌ನಲ್ಲಿ ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಚಾಲ್ತಿ ಪಡಿತರ ಚೀಟಿದಾರರನ್ನು ಗುರುತಿಸುವ ವ್ಯಕ್ತಿಯಾಗಿ ಕಾಣಿಸುವುದು ಹಾಗೂ ಅವರ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಎಂದರು.
ಗುರುತಿಸುವ ವ್ಯಕ್ತಿಯ ಪಡಿತರ ಚೀಟಿ, ಮೊಬೈಲ್ ಸಂಖ್ಯೆ, ವಾಸದ ಮನೆಯ ಸಂಖ್ಯೆ, ವಿದ್ಯುತ್ ಬಿಲ್, ವಿಳಾಸ, ಭಾವಚಿತ್ರ, ಗುರುತಿನಚೀಟಿ ದೃಢೀಕರಿಸಿದ ಪ್ರತಿಗಳನ್ನು ಆನ್ ಲೈನ್‌ನಲ್ಲಿ ದಾಖಲಿಸಿದಾಗ ಅವರ ಭಾವಚಿತ್ರವಿರುವ ಪಡಿತರ ಚೀಟಿ ಪುಟ ತೆರೆದುಕೊಳ್ಳುತ್ತದೆ. ಅವರ ಬಯೋ ಫೋಟೊ ಆನ್ ಲೈನ್‌ನಲ್ಲಿ ಪಡೆದು ಗುರುತಿಸುವ ವ್ಯಕ್ತಿಯ ಹೊಂದಾಣಿಕೆ ಆದ ನಂತರ ಪಡಿತರ ಚೀಟಿ ಪಡೆಯುವ ವ್ಯಕ್ತಿಯ ಪುಟ ತೆರೆದುಕೊಳ್ಳುತ್ತದೆ. ಸ್ವೀಕೃತಿ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡ್ ಬಳಸಿ ಅರ್ಜಿದಾರರ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಆನ್ ಲೈನ್‌ನಲ್ಲಿ ದಾಖಲಿಸಿ ಕುಟುಂಬದ ಎಲ್ಲ ಸದಸ್ಯರ ಹೆಸರು, ಉದ್ಯೋಗ, ಜನ್ಮ ದಿನಾಂಕವನ್ನು ಯಾವುದೆ ತಪ್ಪಿಲ್ಲದೆ ನಮೂದಿಸಬೇಕು. 12 ವರ್ಷ ಮೇಲ್ಪಟ್ಟವರೆಲ್ಲರೂ ಅರ್ಜಿ ನಮೂನೆಯಲ್ಲಿ ಬರುತ್ತಾರೆ. ಅಂತವರ ಭಾವಚಿತ್ರ ಮತ್ತು ಜೀವಮಾಪಕಗಳನ್ನು ಸೆರೆ ಹಿಡಿದು, ಘೋಷಣೆಯೊಂದಿಗೆ ವಾರ್ಷಿಕ ಆಧಾರ ನಮೂದಿಸಿ, ಅರ್ಜಿದಾರರ ಸಹಿ ಮತ್ತು ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ ಲ್ಲೋಡ್ ಮಾಡಲಾಗುತ್ತದೆ ಎಂದು ವಿವರಿಸಿದರು.
ತಾಲೂಕಿನಲ್ಲಿ 39 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ರೋಜಗಾರ್ ಕಂಪ್ಯೂಟರ್ ಆಪರೇಟರ್‌ಗಳಿಗೆ ತರಬೇತಿ ನೀಡಲಾಗಿದ್ದು, ಹೊಸ ಪಡಿತರ ಚೀಟಿ ನಿರ್ವಹಣೆಯನ್ನು ಅವರೆ ನೀರ್ವಹಿಸುತ್ತಾರೆ ಎಂದರು. ಕಾರ್ಯಾಗಾರದಲ್ಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಿ.ಆರ್. ವಿಶ್ವನಾಥ್, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಪಪಂ ಪ್ರಭಾರ ಮುಖ್ಯಾಧಿಕಾರಿ ರಮೇಶ್, ಆಹಾರ ನಿರೀಕ್ಷಕ ಶ್ರೀಪಾದ ಅಡಿಗ, ತಾಪಂ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.