ಮಳೂರು ಕ್ಯಾಂಪಿನಲ್ಲಿ ಹೆಚ್ಚುತ್ತಿರುವ ಜ್ವರ
ಕ.ಪ್ರ.ವಾರ್ತೆ ಶಿರಾಳಕೊಪ್ಪ ಜೂ.7
ಶಿರಾಳಕೊಪ್ಪ ಸಮೀಪದ ಮಳೂರು ಗ್ರಾಮದ ಕ್ಯಾಂಪಿನಲ್ಲಿ ಹಲವಾರು ಜನರು ತೀವ್ರ ಜ್ವರದಿಂದ ಬಳಲುತ್ತಿದ್ದು, ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಸಾಲುಸಾಲಾಗಿ ಬಂದು ದಾಖಲಾಗುತ್ತಿದ್ದಾರೆ. ಕೆಲವು ಗ್ರಾಮಸ್ಥರು ವಿವಿಧ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ವರ ಬಂದಾಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬನ್ನಿ ಎಂದು ಹೇಳುವ ವೈದ್ಯಾಧಿಕಾರಿಗಳು ಕೂಲಿ ಕಾರ್ಮಿಕರಾದ ಮಳೂರು ಗ್ರಾಮದ ಕ್ಯಾಂಪಿನ ಜನ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಆಸ್ಪತ್ರೆಯಲ್ಲಿ ಇಂಜಕ್ಷನ್ ಇದ್ದರೂ, ರೋಗಿಗಳಿಂದ ಹೊರಗಡೆಯಿಂದ ಇಂಜಕ್ಷನ್ ಹಾಗೂ ಕೆಲ ಔಷಧಿಗಳನ್ನು ತರಿಸಿರುವ ಘಟನೆ ಶುಕ್ರವಾರ ನಡೆದಿದೆ.
ಖಾಸಗಿಯಾಗಿ ರಕ್ತ ತಪಾಸಣೆ: ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ರಕ್ತದ ಪರೀಕ್ಷಾ ಕೇಂದ್ರವಿದ್ದರೂ ಸರ್ಕಾರಿ ಖಾಸಗಿ ರಕ್ತ ತಪಾಸಣಾ ಕೇಂದ್ರವರು ಆಸ್ಪತ್ರೆಗೆ ಬಂದು ರಕ್ತ ಮಾದರಿ ಪಡೆದು ರೋಗಿಗಳಿಂದ ರು. 800 ಪಡೆದು ನಂತರ ರಕ್ತದ ವರದಿ ಕೊಡುತ್ತಿರುವ ಘಟನೆ ನಡೆದಿದೆ.
ಇಂತಹ ಹಲವು ಘಟನೆ ನಡೆದಿದ್ದು, ಮಳೂರು ಗ್ರಾಮದ ಮೂಕಮ್ಮ ಎಂಬ ಮಹಿಳೆಯ ಮನೆಯೊಂದರಲ್ಲಿ ನಾಲ್ಕು ಜನರ ರಕ್ತ ಪರೀಕ್ಷೆಗೆ ರು. 2,000ಕ್ಕೂ ಹೆಚ್ಚು ಪಡೆಯಲಾಗಿದೆ. ಹಾಗೆಯೇ ಪತ್ರಿಕೆಯೊಂದಿಗೆ ಮಾತನಾಡಿದ ಮೂಕಮ್ಮ ನಾನು ನನ್ನ ಓಲೆಗಳನ್ನು ಮಾರಿ ಹಣ ಜೋಡಿಸಿ ಕೊಟ್ಟಿದ್ದಾಗಿ ತಿಳಿಸಿದರು.
ಅವರಿಗೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಹೊರಗಡೆ ಔಷಧಿ ಅಂಗಡಿಯಿಂದ ಇಂಜಕ್ಷನ್ ತರಿಸಿದ್ದಾರೆ. ಇದೇ ರೀತಿ ಗ್ರಾಮದ ಡಾಕಪ್ಪ, ಬಸಪ್ಪ, ಪರಸಪ್ಪ, ವಿಜಯ ಗೌರಮ್ಮ, ಮಾಲತೇಶ್ ಸೇರಿದಂತೆ ಹಲವಾರು ರೋಗಿಗಳು ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡರು.
ಮಗು ಶಿವಮೊಗ್ಗ ಆಸ್ಪತ್ರಗೆ: ಈಗಾಗಲೇ 9ಪಾಸಿಟೀವ್ ರೋಗಿಗಳನ್ನು ಗುರುತಿಸಿಕೊಂಡಿರುವ ತಾಲೂಕಿನ ಕೊನೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮಳವಳ್ಳಿಯಲ್ಲಿ ಜನ ಜ್ವರದಿಂದ ಬಳಲಿ ನೊಂದಿರುವ ಬೆನ್ನಲ್ಲೇ ಶುಕ್ರವಾರ ಗ್ರಾಮದ ಸುರೇಶಪ್ಪ ಕರೇಗೌಡರ್ ಅವರ 8ತಿಂಗಳ ಮಗು ಶಂಕಿತ ಡೆಂಘೀ ಇರಬಹುದೆಂದು ಶಿವಮೊಗ್ಗ ತಾಲೂಕಿನ ಮಳವಳ್ಳಿಯಲ್ಲಿ ಕಳೆದ ತಿಂಗಳಿಂದಲೇ ಕಾಣಸಿಕೊಂಡಿರುವ ಡೆಂಘೀ ಇನ್ನೂ ಹಲವಾರು ಕಡೆ ಕಾಣಿಸುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಕಾಣುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವೈದ್ಯಾಧಿಕಾರಿ ಆಸ್ಪತ್ರೆಗೆ ಭೇಟಿ: ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಹೋದಾಗ ಪತ್ರಿಕೆಗೆ ವಿಷಯ ತಿಳಿಯುತ್ತಿದ್ದಂತೆಯೇ ಈ ಎಲ್ಲ ಘಟನೆ ಬಗ್ಗೆ ಜಿಲ್ಲಾ ನೋಡಲ್ ವೈದ್ಯಾಧಿಕಾರಿ ಎಲ್.ಎನ್. ರಾಥೋಡ್ ಹಾಗೂ ತಾಲೂಕು ವೈದ್ಯಾಧಿಕಾರಿ ನಾಗರಾಜ್ ನಾಯ್ಕ್ ಅವರನ್ನು ಪತ್ರಿಕೆ ಪ್ರಶ್ನಿಸಿದಾಗ ಶಿರಾಳಕೊಪ್ಪ ಆಸ್ಪತ್ರೆಗೆ ಭೇಟಿನೀಡಿ ಎಲ್ಲ ವೈದ್ಯರನ್ನು ಕರೆಸಿ ತಪ್ಪಿತಸ್ಥ ವೈದ್ಯರಿಗೆ ಛೀಮಾರಿ ಹಾಕಿದರು.
ಮೇಲಿಂದ ಮೇಲೆ ಎಚ್ಚರಿಕೆ ಕೊಟ್ಟರೂ ತಪ್ಪು ಮಾಡುವದಾದರೆ ನೀವು ಕೆಲಸಮಾಡುವುದೇ ಬೇಡ. ತಾಲೂಕಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಸುತ್ತಿರುವಾಗ ಜನರ ಎದುರು ತಲೆ ತಗ್ಗಿಸುವ ಕಾರ್ಯವನ್ನು ಸಹಿಸುವುದು ಸಾಧ್ಯವಿಲ್ಲ. ಹಾಗೆಯೇ ರೋಗಿಗಳು ಬಡವರೆಂದು ಗೊತ್ತಿದ್ದರೂ, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳು ಇದ್ದರೂ, ಹೊರಗಡೆಯಿಂದ ತರಿಸುವದು ಅಪರಾಧ. ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರ ವಹಿಸಿ ಎಂದು ವೈದ್ಯರಿಗೆ ತಿಳಿಸಿದರು.
10 ಲಕ್ಷ ಔಷಧಿ: ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ 10 ಲಕ್ಷ ಔಷಧಿ ಸ್ಟಾಕ್ ಇದೆ ಎಂದು ತಾಲೂಕು ವೈದ್ಯಾಧಿಕಾರಿಗಳು ಪತ್ರಿಕೆಗೆ ತೋರಿಸಿ ಮನವರಿಕೆ ಮಾಡಿಕೊಟ್ಟರು. ಪ್ರತಿ ಮನೆಯಲ್ಲಿ ಲಾರ್ವಾ ಇರುವದರಿಂದ ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ಮಾರ್ಗದರ್ಶನ ದಂತೆ ನಡೆಯಬೇಕು ಎಂದು ತಿಳಿಸಿ ಮಳೂರು ಗ್ರಾಮಕ್ಕೆ ಭೇಟಿ ನೀಡಿದ ವೈದ್ಯರ ತಂಡ ಲಾರ್ವಾ ಇರುವ ನೀರನ್ನು ಖಾಲಿ ಮಾಡಿಸಿ ಲಾರ್ವಾ ನಾಶ ಮಾಡಸಿತು.