ಇಂದು ಹೊಸನಗರ ಸಾಹಿತ್ಯ ಸಮ್ಮೇಳನ
ಹೊಸನಗರ: ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂ.9ರಂದು ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ್ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗ್ಗೆ 8.30ಕ್ಕೆ ವೃತ್ತದಿಂದ ಕನ್ನಡತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಗೆ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ಚಾಲನೆ ನೀಡುವರು. ತಹಸೀಲ್ದಾರ್ ಅರ್ಚನಾ ರಾಷ್ಟ್ರಧ್ವಜ, ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್ ನಾಡಧ್ವಜ, ತಾ. ಕಸಾಪ ಅಧ್ಯಕ್ಷ ರತ್ನಾಕರ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.
ಬೆಳಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಗೋಷ್ಠಿಗಳು: ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ, ಕ್ಷೇತ್ರ ದರ್ಶನ, ಸಂಗೀತ ಸುಧೆ, ಕವಿಸಮಯ, ಕಂದಕವಿ ಗೋಷ್ಠಿಗಳು, ಸಾಧಕರ ಸನ್ಮಾನ, ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಮಾರೋಪದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಲಿದ್ದು, ಹಿರಿಯ ಸಾಹಿತಿ ದುಂಡಿರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಾದ ಬಿ. ಸ್ವಾಮೀರಾವ್, ಡಾ. ರಾಮಚಂದ್ರರಾವ್, ಪ್ರಭಾಕರ್, ಹೊಸಕೋಟಿ ಹಾಲಪ್ಪಗೌಡ, ವೀರಭದ್ರಪ್ಪ, ಟಿ.ಆರ್. ಕೃಷ್ಣಪ್ಪ, ಜೂಜಬಾಂಜ್ ಕಬಳೆ, ಅಶೋಕಗುಳೇದ್, ಪದ್ಮಮ್ಮ, ಕೆ.ಎಸ್. ನಾಗರತ್ನರಿಗೆ ಸನ್ಮಾನ ಮಾಡಲಾಗುವುದು.
ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸ್ವಾಗತ ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಮತ್ತು ಅಲಂಕಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದ್ದು, ಸಮ್ಮೇಳನ ಸುಸೂತ್ರವಾಗಿ ನಡೆಸಲು ಸಿದ್ಧತೆ ನಡೆದಿದೆ.