ಖಾಸಗಿ ಆಸ್ಪತ್ರೆ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಶಿವಮೊಗ್ಗ: ಇತ್ತೀಚೆಗೆ ನಗರದಲ್ಲಿ ಖಾಸಗಿ ಆಸ್ಪತ್ರೆ ಮೇಲೆ ನಡೆದ ದಾಳಿ ಖಂಡಿಸಿ ಭಾರತೀಯ ವೈದ್ಯ ಸಂಘದ ಜಿಲ್ಲಾ ಶಾಖೆ ಸದಸ್ಯರು ಶನಿವಾರ ನಗರದ್ಯಂತ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಎಲ್ಲಾ ಖಾಸಗಿ ವೈದ್ಯರು, ನರ್ಸಿಂಗ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ವೈದ್ಯಕೀಯ ವೃತ್ತಿಯಲ್ಲಿರುವವರು ಐಎಂಎ ಸಭಾಂಗಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ದಾಂದಲೆ ನಡೆಸಿದ್ದಾರೆ: ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳಿನ ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಚಿಕಿತ್ಸೆಯಲ್ಲಿ ಯಾವುದೇ ಕರ್ತವ್ಯ ಲೋಪವಾಗಿಲ್ಲ. ಆದರೆ, ಮೃತ ಮಗುವಿನ ಸಂಬಂಧಿಕರು ಹಾಗೂ ಸ್ನೇಹಿತರು ವಾತ್ಸಲ್ಯ ಆಸ್ಪತ್ರೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಆತಂಕ: ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ಇಂತಹ ಅಹಿತಕರ ಘಟನೆಗಳು ವೈದ್ಯ ಸಮೂಹಕ್ಕೆ ತುಂಬ ನೋವನ್ನೂಂಟು ಮಾಡಿದೆ. ಕೆಲವು ದುಷ್ಕರ್ಮಿಗಳಿಂದ ನಡೆದ ಅನಾಗರಿಕ ವರ್ತನೆಯಿಂದ ಸೇವೆ ಪಡೆದ ಎಲ್ಲಾ ರೋಗಿಗಳು ತಲೆ ತಗ್ಗಿಸುವಂತಹದ್ದು ಎಂದರು.
ಪ್ರತಿಭಟನೆಯಲ್ಲಿ ಡಾ. ಮಲ್ಲೇಶ್ ಹುಲ್ಲಮನಿ, ಡಾ. ಅಶೋಕಪ್ಪ, ಡಾ. ಸುಭಾಷ್, ಡಾ. ಅಶೋಕ್ ಪೈ, ಡಾ. ಕೆ.ಆರ್. ಶ್ರೀಧರ್, ಡಾ. ವಿಶ್ವಭಾರತಿ, ಡಾ. ಗೀತಾ ಸೇರಿದಂತೆ ಖಾಸಗಿ ವೈದ್ಯರು ಇದ್ದರು.