ಗುಟ್ಕಾ ನಿಷೇಧ ಸರಿ ಅಲ್ಲ...
ಶಿವಮೊಗ್ಗ: ಸದನ ನಡೆಯುತ್ತಿರುವಾಗ ಯಾರೊಂದಿಗೂ ಚರ್ಚಿಸದೇ, ಅಡಕೆ ಬೆಳೆ ಪ್ರದೇಶದ ಜನಪ್ರತಿನಿಧಿಗಳು ಬೆಂಗಳೂರಿನಲ್ಲೇ ಇದ್ದರೂ ಅವರ ಅಭಿಪ್ರಾಯ ಪಡೆಯದೇ, ಯಾರೊಂದಿಗೂ ಚರ್ಚಿಸದೆ ಗುಟ್ಕಾ ನಿಷೇಧಿಸಿರುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಮನುಷ್ಯನ ಆರೋಗ್ಯಕ್ಕೆ ಹಾನಿಯಾಗಬಹುದಾದ ಎಲ್ಲಾ ಮಾದಕ ವಸ್ತುಗಳನ್ನೂ ಬಿಜೆಪಿ ವಿರೋಧಿಸುತ್ತದೆ. ಆದರೆ, ಎಲ್ಲವನ್ನೂ ಬಿಟ್ಟು ರೈತರ ಆರ್ಥಿಕ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುವ ಗುಟ್ಕಾ ನಿಷೇಧಿಸಲು ಸರ್ಕಾರ ಹೊರಟಿರುವುದು ಸರಿಯಲ್ಲ. ಗುಟ್ಕಾ ಹಾನಿಕರವೆಂದು ಹೇಳುವ ಸರ್ಕಾರ ಅದರಲ್ಲಿರುವ ರಾಸಾಯನಿಕಗಳ ಬಳಕೆಯ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಏಕಾಏಕಿ ಗುಟ್ಕಾ ನಿಷೇಧಿಸಿರುವುದು ಅಡಕೆ ಬೆಳೆಗಾರ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದಿದ್ದಾರೆ.ಮಳೆ ಇಲ್ಲದೇ ಕಳೆದ 2 ವರ್ಷಗಳಿಂದ ಸಾಕಷ್ಟು ಅಡಕೆ ತೋಟಗಳು ಒಣಗಿವೆ. ಹಳದಿ ರೋಗ, ಕೊಳೆ ರೋಗ, ಬೇರುಹುಳು ರೋಗಗಳಿಂದ ಅಡಕೆ ಬೆಳೆಗಾರ ಸಂಕಷ್ಟಕ್ಕೊಳಗಾಗಿರುವ ಸಂದರ್ಭದಲ್ಲಿ ಗುಟ್ಕಾ ನಿಷೇಧ ದೊಡ್ಡ ಪೆಟ್ಟು ನೀಡಲಿದೆ ಎಂಬ ಸಾಮಾನ್ಯ ಜ್ಞಾನವೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ಟೀಕಿಸಿದ್ದಾರೆ.