ಜಿಪಂ ಗೊಂದಲದ ಲಾಭ ಅಭಿವೃದ್ಧಿ ವೇದಿಕೆಗೆ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಜಿಪಂನಲ್ಲಿ ಇನ್ನೂ ಅತಂತ್ರ ಸ್ಥಿತಿ ಮುಂದುವರಿದಿದೆ. ಎಲ್ಲಾ ಸ್ಥಾಯಿ ಸಮಿತಿಯ ಸಭೆಗಳು ಮುಗಿದಿವೆ. ಉಳಿದಿರುವುದು ಸಾಮಾನ್ಯ ಸಭೆಯಷ್ಟೇ. ಯಾವತ್ತು ಈ ಸಭೆ ನಡೆಯುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ಸ್ವತಃ ಅಧ್ಯಕ್ಷರೇ ಇಲ್ಲ. ಏಕೆಂದರೆ ಸ್ವತಃ ಅಧ್ಯಕ್ಷ-ಉಪಾಧ್ಯಕ್ಷರೇ ಬಿಜೆಪಿಯಿಂದ ಬಂಡಾಯವೆದ್ದಿರುವ ಗುಂಪಿನಲ್ಲಿ ಇದ್ದಾರೆ.
ಈಗ ಜಿಪಂನಲ್ಲಿ ಆಡಳಿತ ನಡೆಸುತ್ತಿರುವುದು ತಾಂತ್ರಿಕವಾಗಿ ಬಿಜೆಪಿ ಆದರೂ ವಾಸ್ತವವಾಗಿ ಈ ಪಕ್ಷದಿಂದ ಬಂಡೆದ್ದಿರುವ ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ ಎಂಬ 11 ಸದಸ್ಯರ ಗುಂಪು. ಅಲ್ಪಸಂಖ್ಯಾತ ಗುಂಪು ಆಡಳಿತ ನಡೆಸುತ್ತಿರುವ ವಿಚಿತ್ರ ಪರಿಸ್ಥಿತಿ ಇದು.
ಆದರೆ ಈ ಗುಂಪಿನ ವಾದ ವಿಚಿತ್ರವಾಗಿದೆ. ವೇದಿಕೆ ರಚಿಸಿಕೊಂಡಿದ್ದೇವೆ ಎಂದರೆ ನಾವು ಬಿಜೆಪಿ ಬಿಟ್ಟಿದ್ದೇವೆ, ಕೆಜೆಪಿ ಸೇರಿದ್ದೇವೆ ಎಂದು ಅರ್ಥವಲ್ಲ ಎನ್ನುತ್ತಿದ್ದಾರೆ. ಅಂತರಂಗದಲ್ಲಿ ಏನೇ ಇದ್ದರೂ ಈ 11 ಸದಸ್ಯರು ಬಹಿರಂಗವಾಗಿ ಎಲ್ಲಿದ್ದಾರೆ ಎನ್ನುವುದೇ ಕಗ್ಗಂಟಾಗಿದೆ.
ಆದರೆ ಜಿಪಂನಲ್ಲಿ ಬಿಜೆಪಿ ಒಡೆದಿದ್ದು ಕೆಜೆಪಿ ಕಾರಣದಿಂದಲೇ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗದು.
ಸಮೀಕರಣ ಏನು: ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ ಅಧಿಕಾರದಲ್ಲಿ ಮುಂದುವರಿಯಲು ಕನಿಷ್ಠ ಇನ್ನೂ 5 ಸದಸ್ಯರ ಬೆಂಬಲ ಪಡೆಯಲೇಬೇಕು. ಅದಕ್ಕಿರುವ ಸಾಧ್ಯತೆಗಳು ಇವು.
ವರು ಬಿಜೆಪಿಗೆ ವಾಪಸು ಹೋಗಬೇಕು. ಅಥವಾ ಬಿಜೆಪಿಯ ಐವರು ಸದಸ್ಯರು ಬೆಂಬಲಿಸಬೇಕು. ಅದೀಗ ಅಸಾಧ್ಯದ ಮಾತು.
ಜೆಡಿಎಸ್ನ ಇಬ್ಬರು ಸದಸ್ಯರ ಬೆಂಬಲ ಸಾಕಾಗುವುದಿಲ್ಲ, ಉಳಿಯುವ ಒಂದೇ ಅವಕಾಶ ಕಾಂಗ್ರೆಸ್ ಈ ವೇದಿಕೆಯನ್ನು ಬೆಂಬಲಿಸಬೇಕು. ಆದರೆ ಸದ್ಯ ಅವರ ಗುರಿ ಅಧಿಕಾರ ಹಿಡಿಯುವತ್ತ ಇದೆ. ಹಾಗಾಗಿ ಅವಿಶ್ವಾಸ ಮಂಡಿಸುವವರು ಯಾರು ಎಂಬುದೇ ದೊಡ್ಡ ಜಿಜ್ಞಾಸೆಯಾಗಿದೆ.
ಯಾರಿಂದ ಮಂಡನೆ: ಅವಿಶ್ವಾಸ ಮಂಡನೆ ಎನ್ನುವುದು ಬೆಕ್ಕಿನ ಕೊರಳಿಗೆ ಕಟ್ಟುವ ಗಂಟೆಯಾಗಿದೆ. ಗಂಟೆ ಕಟ್ಟುವವರು ಯಾರು ಎಂಬ ಚರ್ಚೆ ಮುಕ್ತಾಯವೇ ಕಾಣುತ್ತಿಲ್ಲ.
ತಮ್ಮ ಪಕ್ಷದಿಂದ ಆಯ್ಕೆಯಾದ 11 ಸದಸ್ಯರು ಬಂಡೆದ್ದು ಹೊರನಡೆದಿದ್ದರೂ ಬಿಜೆಪಿ ಅವಿಶ್ವಾಸ ಮಂಡಿಸುವ ಸಾಧ್ಯತೆ ಕಡಿಮೆಯೇ. ಏಕೆಂದರೆ ಅವಿಶ್ವಾಸ ಮಂಡನೆಯಿಂದ ಬಿಜೆಪಿಗೆ ಆಗಬೇಕಾದ್ದೇನೂ ಇಲ್ಲ. ಆಗುವ ನಷ್ಟ ಆಗಿಹೋಗಿದೆ.
ಅಲ್ಲದೇ, ಅವಿಶ್ವಾಸ ಮಂಡಿಸಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಕೆಳಗಿಸಿದರೆ ತಾಂತ್ರಿಕವಾಗಿ ಅಧಿಕಾರದಲ್ಲಿದ್ದೇವೆ ಎಂಬ ಹೆಮ್ಮೆಯೂ ಇಲ್ಲವಾಗುತ್ತದೆ.
ಹಾಗಾಗಿ ಅವಿಶ್ವಾಸ ಮಂಡಿಸಲು ಮುಂದಾಗುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇನ್ನು ಕಾಂಗ್ರೆಸ್ ಅವಿಶ್ವಾಸ ಮಂಡಿಸಲು ಹಿಂದೆಮುಂದೆ ನೋಡುತ್ತಿದೆ. ಏಕೆಂದರೆ ಮುಂದೆ ಕೆಜೆಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕಾದ್ದು ಅನಿವಾರ್ಯ. ಈಗಲೇ ಜಟಾಪಟಿ ನಡೆಸುವುದಕ್ಕೆ ಹಿಂದೆಮುಂದೆ ನೋಡುತ್ತಿದೆ. ಬಿಜೆಪಿ ಅವಿಶ್ವಾಸ ಮಂಡಿಸುತ್ತೇನೋ ಎಂದು ಕಾಯುತ್ತಿದೆ.
ಈ ಗೊಂದಲದ ಲಾಭ ಆಗುವುದು ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ ರಚಿಸಿಕೊಂಡು ಅಧ್ಯಕ್ಷ-ಉಪಾಧ್ಯಕ್ಷರಾಗಿರುವ ಗೀತಾ ಮಲ್ಲಿಕಾರ್ಜುನ್ ಹಾಗೂ ಹೇಮಾ ಪಾವನಿ ಅವರಿಗೆ. ಈಗಾಗಲೇ ಅವರ ಅಧಿಕಾರಾವಧಿಯ 8 ತಿಂಗಳು ಪೂರೈಸಿದ್ದಾರೆ. ಉಳಿದಿರುವುದು 12 ತಿಂಗಳಷ್ಟೇ. ಗೊಂದಲ ಮುಂದುವರಿದಷ್ಟೂ ಇವರ ಅಧಿಕಾರದ ಅವಧಿ ಲಂಭಿಸುತ್ತಾ ಹೋಗುತ್ತದೆ. ಸದ್ಯ ಜಿಲ್ಲಾ ಗ್ರಾಮೀಣಾಭಿವೃದ್ಧಿ ವೇದಿಕೆ, ತನ್ಮೂಲಕ ಕರ್ನಾಟಕ ಜನತಾ ಪಕ್ಷ ನಿರೀಕ್ಷಿಸುತ್ತಿರುವುದೂ ಇದನ್ನೇ.