ದಾಖಲೆ ಮಟ್ಟದ ಕಾಣಿಕೆ ಸಂಗ್ರಹ
ಕ.ಪ್ರ.ವಾರ್ತೆ ಶಿಕಾರಿಪುರ ಜೂ.8
ಪಟ್ಟಣದ ಆರಾದ್ಯ ದೈವ ಶ್ರೀ ಹುಚ್ಚೂರಾಯಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕೇವಲ ತಿಂಗಳ ಅವಧಿ ಯಲ್ಲಿಯೇ ದಾಖಲೆ ಮಟ್ಟದಲ್ಲಿ ರು. 7 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.
ದೇವಸ್ಥಾನದ ಬ್ರಹ್ಮರಥ ಶಿಥಿಲವಾಗಿ ಹಲವು ವರ್ಷ ಗತಿಸಿದರೂ ಭಕ್ತಾಧಿಗಳಿಂದ ಸಂಗ್ರಹವಾದ ಹಣ ಮುಜರಾಯಿ ಇಲಾಖೆಗೆ ಸಂದಾಯವಾಗಿ ಈವರೆಗೂ ರಥ ದುರಸ್ತಿಗಾಗಿ ಹಣವಿಲ್ಲದ ಬಗ್ಗೆ ಸ್ಥಳೀಯ ಭಕ್ತಾಧಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕ್ಷೇತ್ರದ ಶಾಸಕ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಭಕ್ತರ ಅವಶ್ಯಕತೆಗೆ ಅನುಗುಣವಾಗಿ ದೇವಾಲಯವನ್ನು ಕೋಟ್ಯತಂರ ವೆಚ್ಚದಲ್ಲಿ ಗೋಪುರ, ಒಳಾಂಗಣ,ಪೌಳಿ ಸಹಿತ ಅಂದವಾಗಿಸಿ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ದೊಡ್ಡ ಧಾರ್ಮಿಕ ಕೇಂದ್ರವಾಗಿಸಿದ್ದಾರೆ.
ಇದರೊಂದಿಗೆ ಇದೀಗ ಅಂದಾಜು ರು. 2 ಕೋಟಿ ವೆಚ್ಚದಲ್ಲಿ ಸಾರ್ವಜನಿಕರಿಗೆ ಮಂಗಳ ಕಾರ್ಯಕ್ಕಾಗಿ ಸಮುದಾಯ ಭವನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಸಂಪೂರ್ಣ ದೇವಾಲಯ ಗರ್ಭಗುಡಿಯನ್ನು ಹೊರತುಪಡಿಸಿ ತನ್ನ ಮೂಲ ರೂಪವನ್ನು ಕಳೆದುಕೊಂಡು ಹೊಚ್ಚ ಹೊಸದಾಗಿ ಕಂಗೊಳಿಸತೊಡಗಿದೆ.
ಸ್ವಾಮಿಯ ಕೃಪಾಕಟಾಕ್ಷ ಬೇಡಿ ನಿತ್ಯ ಬರುತ್ತಿರುವ ಸಹಸ್ರಾರು ಭಕ್ತರ ಅವಶ್ಯಕತೆಗೆ ಅನುಗುಣವಾಗಿ ದೇವಾಲಯ ಸುಂದರವಾಗಿ ಕಂಗೊಳಿಸುತ್ತಿದ್ದರೂ ಅತ್ಯವಶ್ಯಕವಾದ ಬ್ರಹ್ಮರಥೋತ್ಸವ ಶಿಥಿಲಾವಸ್ಥೆಯಿಂದಾಗಿ ಈ ಬಾರಿ ಪರಂಪರಾಗತ ಗಡಿ ತಲುಪಲಾಗದಿದ್ದು ಈ ಬಗ್ಗೆ ಮುಜರಾಯಿ ಇಲಾಖೆ ನೂತನ ರಥ ನಿರ್ಮಾಣಕ್ಕೆ ಸಿದ್ದವಾಗಬೇಕಿದೆ.
ಕಳೆದ ಹಲವು ವರ್ಷಗಳಿಂದ ದೇವಾಲಯದ ಹುಂಡಿಯ ಕಾಣಿಕೆ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಿದ್ದು ಈ ಬಾರಿ ರಥೋತ್ಸವದ ಹಿನ್ನಲೆಯಲ್ಲಿ ಕೇವಲ ತಿಂಗಳ ಅವಧಿಯಲ್ಲಿಯೇ ದಾಖಲೆಯ 7.40 ಲಕ್ಷ ಹಣದ ಜತೆಗೆ ಇತರೆ ಆಭರಣಗಳು ಸಂಗ್ರಹವಾಗಿದ್ದು ಬುಧವಾರ ತಹಸೀಲ್ದಾರ್ ಪಿ.ಐ. ಗಣಾಚಾರ್ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲಾಗಿದೆ.
ಅಧಿಕ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ ದೇವಾಲಯದ ಅಭಿವೃದ್ಧಿಗಾಗಿ ಬಳಕೆಯಾಗದ ಬಗ್ಗೆ ವಿ.ಹಿಂ.ಪ ಉಪಾಧ್ಯಕ್ಷ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾಣಿಕೆಯ ಹಣವನ್ನು ದೇವಾಲಯದ ಅಭಿವೃದ್ಧಿ ಜತೆಗೆ ಭಕ್ತರ ಅವಶ್ಯಕತೆಗೆ ಬಳಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಬೇಕಾಗಿದೆ ಎಂದು ಭಕ್ತರು ಮನವಿ ಮಾಡಿದ್ದಾರೆ.