ಅಧಿಕಾರಿಗಳಿಗೆ ಚಳಿ ಬಿಡಿಸಿದ ಕಾಗೋಡು
ಕ.ಪ್ರ. ವಾರ್ತೆ ಶಿವಮೊಗ್ಗ ಜೂ.9
ಇನ್ನು ಒಂದು ವಾರದೊಳಗೆ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವಿಧಾನಸಭಾ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಜಿಲ್ಲೆಯ ಕುಡಿಯುವ ನೀರು ಮತ್ತು ಬರಗಾಲದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು, ಸರ್ಕಾರದಿಂದ ಜಿಲ್ಲೆಗೆ ಕುಡಿಯುವ ನೀರಿಗಾಗಿ 25 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ, ಖರ್ಚು ಮಾಡಿರುವುದು ಮಾತ್ರ ಕೇವಲ 5.2 ಕೋಟಿ ಮಾತ್ರ. ಅಲ್ಲದೇ ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ.
ಕೋಟ್ಯಂತರ ರುಪಾಯಿ ಹಣ ಇದ್ದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗದಿರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಏನು ಕ್ರಮ ಜರುಗಿಸಿದ್ದೀರಿ? ಕಳೆದ ಬಾರಿ ಶಿಕಾರಿಪುರ, ಶಿವಮೊಗ್ಗ ತಾಲೂಕು ಮತ್ತು ಭದ್ರಾವತಿಯನ್ನು ಬರಪಿಡಿತ ಪ್ರದೇಶಗಳೆಂದು ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಅದೇ ರೀತಿ ಬರಪರಿಹಾರಕ್ಕೆ ಸರ್ಕಾರ ಕೂಡ ಹಣ ಬಿಡುಗಡೆ ಮಾಡಿತ್ತು. ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿದ್ದೀರಿ ಎಂದು ಅವರು ಪ್ರಶ್ನಿಸಿದರು.
ಹೊಸನಗರ, ಸಾಗರ ತಾಲೂಕು ಸೇರಿದಂತೆ ಜಿಲ್ಲೆಯ ಇತರೆಡೆ ಕುಡಿಯುವ ನೀರಿಗಾಗಿ ಯಾವುದೇ ಕ್ರಿಯಾ ಯೋಜನೆ ತಯಾರಾಗಿಲ್ಲ.
ಇದಕ್ಕೆ ಕಾರಣಗಳೇನು ತಾಲೂಕು ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಷ್ಟು ಗ್ರಾಮ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಿ ಮಾಹಿತಿ ಕೊಡಿ ಎಂದರು.
ಕ್ರಿಯಾ ಯೋಜನೆ ಸಿದ್ಧವಾಗಿಲ್ಲ: ತಕ್ಷಣ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಸರ್ಕಾರ ಮತ್ತು ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಲಾಗಿದೆ. ಆದರೆ, ಕೆಲ ತಾಲೂಕುಗಳಿಂದ ಕುಡಿಯುವ ನೀರಿಗೆ ಕುರಿತಂತೆ ಯಾವುದೇ ಕ್ರಿಯಾ ಯೋಜನೆಗಳು ಸಿದ್ಧವಾಗಿಲ್ಲ. ಆದ್ದರಿಂದ ಜಿಲ್ಲಾಡಳಿತದಿಂದ ಹಣ ಬಿಡುಗಡೆ ಮಾಡಲಾಗಿಲ್ಲ.
ಸೋಮವಾರ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಭೆ ಕರೆದು ಕ್ರಮಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು.
ಕಾಗೋಡು ತಿಮ್ಮಪ್ಪ ಮಾತನಾಡಿ, ಮೊದಲು ಚುನಾವಣೆ ಇತ್ತು, ಚುನಾವಣಾ ನೀತಿ ಸಂಹಿತೆ ಇತ್ತು. ಇದೀಗ ಯಾವ ನೀತಿ ಸಂಹಿತೆ ಇದೆ. ಕ್ರಿಯಾ ಯೋಜನೆ ಸಿದ್ಧಮಾಡಲು ಏನು ಸಮಸ್ಯೆ ಎಂದರಲ್ಲದೇ, ಈ ಕಾಲದಲ್ಲಿ ನೀರು ಕೊಡಲಾಗದಿದ್ದರೆ ಮತ್ಯಾವ ಕಾಲದಲ್ಲಿ ನೀರು ಕೊಡಬೇಕು. ಹಣದ ಬಗ್ಗೆ ಸಮಸ್ಯೆ ಇದ್ದರೆ ನಮ್ಮನ್ನು ಕೇಳಿ ಹಣವನ್ನು ಪೂರೈಸುತ್ತೇವೆ. ಮೊದಲು ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಿ ಎಂದರು.
ತರಾಟೆ: ಜಿಲ್ಲೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅಧಿಕಾರಿಗಳು ಗ್ರಾಮ, ಹಳ್ಳಿಗಳಿಗೆ ಹೋಗಿ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗಿದ್ದಾರೆ.
ಶಿವಮೊಗ್ಗ, ಶಿಕಾರಿಪುರ, ಸೊರಬದಲ್ಲಿ ಹೆಚ್ಚು ಹಿಂದುಳಿದ ವರ್ಗದ ಜನರಿದ್ದಾರೆ. ಆದರೆ, ಇದುವರೆಗೆ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಇಲ್ಲಿನವರೆಗೆ ಯಾವ ಕಾರ್ಯಾಕ್ರಮ ಮಾಡಿ ಅರಿವು ಮೂಡಿಸಿದ್ದಿರಿ ಎಂದು ಸವಾಲೆಸೆದರು.
ಮೌನಕ್ಕೆ ಶರಣು: ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ನಿರುದ್ಯೋಗಿ ಯುವಕರನ್ನು ಬಳಸಿಕೊಳ್ಳಬಹುದಿತ್ತು. ಅದ್ಯಾವುದನ್ನೂ ಮಾಡದೇ ಯೋಜನೆಯನ್ನು ವಿಫಲ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾದ, ತಾಲೂಕು ಮಟ್ಟದ ಅಧಿಕಾರಿಗಳು ಕೆಲ ಹೊತ್ತು ಕಕ್ಕಾಬಿಕ್ಕಿಯಾದರು. ಅಲ್ಲದೇ, ಕಾಗೋಡು ತಿಮ್ಮಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಲು ಮಾತುಗಳಿಲ್ಲದೆ ಮೌನಕ್ಕೆ ಶರಣಾದರು.
ಸಭೆಯಲ್ಲಿ ಜಿಲ್ಲಾರಕ್ಷಣಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಸೊರಬ ಶಾಸಕ ಮಧು ಬಂಗಾರಪ್ಪ ಮತ್ತಿತರರು ಇದ್ದರು.
ಜಿ.ಪಂ. ಸಭೆ ಕರೀರಿ
ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಕರೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆ ಆದ ನಂತರ ಸಭೆ ಕರೆಯಬಹುದಿತ್ತು. ಅದು ಕೂಡ ಅಧಿಕಾರಿಗಳು ಮಾಡದಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದ ತಿಮ್ಮಪ್ಪ, ಕೂಡಲೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ತಿಳಿಸಿ ಸಭೆ ಕರೆದು ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದರು.
ಮರುಕಳಿಸಿದ ಕಾಂಗ್ರೆಸ್ ಸಂಸ್ಕೃತಿ
ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕುಡಿಯುವ ನೀರು, ಬರಗಾಲ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದಂತೆ ಕಾಂಗ್ರೆಸ್ ಕಾರ್ಯಕರ್ತರು ತುಂಬಿಕೊಂಡಿದ್ದರು. ಕೆಲ ಪತ್ರಕರ್ತರು ಮತ್ತು ಅಧಿಕಾರಿಗಳು ನಿಂತುಕೊಂಡೇ ಸಭೆಯನ್ನು ವೀಕ್ಷಿಸಿದರು. ಈ ವೇಳೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯರೊಬ್ಬರು ಪತ್ರಕರ್ತರಿಗೆ ಗದರಿದ ಪ್ರಸಂಗವೂ ನಡೆಯಿತು.
ಇಂದು, ನಾಳೆ ಸಭೆ
ಸುದ್ದಿಗಾರರೊಂದಿಗೆ ಮಾತನಾಡಿದ ಸಭಾಪತಿ ಕಾಗೋಡು ತಿಮ್ಮಪ್ಪ, ಜಿಲ್ಲೆಯಲ್ಲಿ ತಲೆದೋರಿರುವ ಬಗರ್‌ಹುಕುಂ, ಹೆಗಲತ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲು ಜೂನ್ 10ಮತ್ತು 11ರಂದು ಸಭೆ ಕರೆಯಲಾಗಿದೆ.
ಅರಣ್ಯ ವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲಾ ಪಶು ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು ಮಾಡಿರುವುದರ ಕುರಿತು ಇಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿ ನಡೆಯಬೇಕಿದ್ದ, ವಿಮಾನ ನಿಲ್ದಾಣ ಕಾಮಗಾರಿ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಮರು ಚಾಲನೆ ನೀಡಲಾಗುವುದು ಎಂದರು.