ಕನ್ನಡ ಕಾಳಜಿ ತೋರುತ್ತಿರುವವರಿಂದ ಆಂಗ್ಲ ಶಾಲೆಗೆ ಅನುಮತಿ ಕೋರಿಕೆ
ಹೊಸನಗರ: ಕನ್ನಡ ಭಾಷೆ, ನಾಡು ನುಡಿ ಬಗ್ಗೆ ಅತೀವ ಕಾಳಜಿ ತೋರುವವರೆ ತೆರೆಮರೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ಕೋರುತ್ತಿರುವುದು ನೋವಿನ ಸಂಗತಿ ಎಂದು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಷಾದಿಸಿದರು. ಪಟ್ಟಣದ ವಿದ್ಯಾಸಂಘ ರಂಗಮಂದಿರದಲ್ಲಿ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಕನ್ನಡದ ಹೋರಾಟಗಾರರು ಎಂದು ಸೋಗು ಹಾಕಿಕೊಂಡವರಿಂದಲೆ ಕನ್ನಡ ಅವನತಿಯಾಗುತ್ತಿದೆ. ನಮ್ಮ ನಾಡು ನುಡಿ, ಸಂಸ್ಕೃತಿ ಬಗ್ಗೆ ಸ್ವಯಂ ಪ್ರೇರಿತ ಕಾಳಜಿ ಹೊಂದಿದಾಗ ಮಾತ್ರ ಕನ್ನಡದ ಉದ್ಧಾರ ಸಾಧ್ಯ ಎಂದರು.
ಕನ್ನಡಭವನ ನಿರ್ಮಾಣ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕನ್ನಡ ಪ್ರೀತಿ, ಪುಸ್ತಕ ಪ್ರೀತಿ, ಪುಸ್ತಕ ಓದು ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಸಾರಸ್ವತ ಲೋಕಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಧ್ಯಯನ ಪ್ರವೃತಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂಬುದನ್ನು ಅರಿಯಬೇಕು ಎಂದರು. ಸಮ್ಮೇಳನಾಧ್ಯಕ್ಷ ಡಾ.ಎಸ್.ಪಿ. ಪದ್ಮಪ್ರಸಾದ್, ಕನ್ನಡರೇ ಕನ್ನಡದ ಬಗ್ಗೆ ಇರುವ ಕೀಳರಿಮೆಯಿಂದ ಹೊರಬರಬೇಕು. ಕನ್ನಡದ ನೆಲದಲ್ಲಿ ಬದುಕಲು ಬರುವ ಹೊರನಾಡಿನವರಿಗೆ ಕನ್ನಡ ಕಲಿಯ ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ ಎಂದರು.